ದೋಷಪೂರಿತ ವ್ಯವಸ್ಥೆಯೇ ಅನಾಹುತಕ್ಕೆ ಕಾರಣ: S I R ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ತೀವ್ರ ವಾಗ್ದಾಳಿ
ಚಂದ್ರ ಕುಮಾರ್ ಬೋಸ್ | Photo Credit : PTI
ಕೋಲ್ಕತಾ, ಜ. 21: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೋಷಪೂರಿತ ಪ್ರಕ್ರಿಯೆಯಾಗಿದ್ದು, ಅದೇ ಅನಾಹುತಕ್ಕೆ ಕಾರಣವಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಉಳಿಸಿಕೊಳ್ಳಲು ಹಕ್ಕು ಸಾಬೀತುಪಡಿಸುವ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಹಾಜರಾದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಮೊಮ್ಮಗರಾದ ಚಂದ್ರ ಕುಮಾರ್ ಬೋಸ್, ತಮ್ಮಗೆ ನೀಡಲಾದ ಎಣಿಕೆ ನಮೂನೆಯಲ್ಲಿ ಪ್ರಮುಖ ಕಾಲಂ ಒಂದನ್ನು ಬಿಡಲಾಗಿದೆ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದರು.
ಈ ವ್ಯವಸ್ಥೆ ದೋಷಪೂರಿತವಾಗಿದ್ದು, ಆತುರದಿಂದ ಜಾರಿಗೆ ತರಲಾಗಿದೆ. ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡದೇ ಇದನ್ನು ನಡೆಸಲಾಗುತ್ತಿದೆ. ಇದರ ಫಲವಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಎರಡು ವರ್ಷಗಳ ಕಾಲ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದ ಚಂದ್ರ ಕುಮಾರ್ ಬೋಸ್ ಹೇಳಿದರು.
ಬಿಜೆಪಿಯ ಆಜ್ಞೆಯ ಮೇರೆಗೆ ಚುನಾವಣಾ ಆಯೋಗ ಯೋಜನೆಯಿಲ್ಲದ ಹಾಗೂ ನಿರಂಕುಶ ಕ್ರಮ ಕೈಗೊಂಡಿದ್ದು, ಇದು ಪಶ್ಚಿಮ ಬಂಗಾಳದ ಜನರಿಗೆ ಕಿರುಕುಳ ಉಂಟು ಮಾಡಿದೆ ಎಂಬ ತೃಣಮೂಲ ಕಾಂಗ್ರೆಸ್ ಆರೋಪಕ್ಕೆ ಅವರು ಬಹುತೇಕ ಬೆಂಬಲ ವ್ಯಕ್ತಪಡಿಸಿದರು.
ವಿಚಾರಣೆಗೆ ಕರೆದಿರುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ವಯಸ್ಸಾದ ಮತದಾರರು ಸರದಿ ಸಾಲಿನಲ್ಲಿ ನಿಂತು ಅಸ್ವಸ್ಥರಾಗುವುದನ್ನು ನೋಡಿದಾಗ ಕಳವಳ ಉಂಟಾಗುತ್ತದೆ ಎಂದು ಅವರು ಮಂಗಳವಾರ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿರುವ ಹಲವು ಗಣ್ಯ ವ್ಯಕ್ತಿಗಳಲ್ಲಿ ಚಂದ್ರ ಕುಮಾರ್ ಬೋಸ್ ಕೂಡ ಒಬ್ಬರು. ಇತರರಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್, ಬೆಂಗಾಳಿ ಚಿತ್ರನಟ ದೇವ್, ಕ್ರಿಕೆಟರ್ ಮುಹಮ್ಮದ್ ಶಮಿ, ಉದ್ಯಮಿ ಸ್ವಪನ್ ಸಾಧನ್ ಬಸು ಹಾಗೂ ಸಾಹಿತಿ ಜಾಯ್ ಗೋಸ್ವಾಮಿ ಸೇರಿದ್ದಾರೆ.