Uttar Pradesh | ಪ್ರಯಾಗ್ ರಾಜ್ ನಲ್ಲಿ IAF ತರಬೇತಿ ವಿಮಾನ ತುರ್ತು ಭೂಸ್ಪರ್ಶ
Photo Credit : PTI
ಪ್ರಯಾಗ್‌ರಾಜ್, ಜ. 21: ಭಾರತೀಯ ವಾಯುಪಡೆ (ಐಎಎಫ್)ಯ ತರಬೇತಿ ವಿಮಾನವೊಂದು ಬುಧವಾರ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಿಯಮಿತ ತರಬೇತಿ ಹಾರಾಟದಲ್ಲಿದ್ದಾಗ, ವಿಮಾನ ನಿಲ್ದಾಣದ ಸಮೀಪದ ಕೆರೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತುರ್ತು ನೆರವು ತಂಡಗಳು ಸ್ಥಳಕ್ಕೆ ಧಾವಿಸಿ ಇಬ್ಬರು ಪೈಲಟ್ ಗಳನ್ನು ರಕ್ಷಿಸಿವೆ.
ವಿಮಾನ ಪತನಗೊಂಡಿದೆ ಎಂಬ ಆರಂಭಿಕ ಅನುಮಾನವಿದ್ದರೂ, ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಬಳಿಕ ಅಧಿಕಾರಿಗಳು ಸ್ಪಷ್ಟಪಡಿಸಿದರು.
ವಿಮಾನ ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದ ನಂತರ ನೀರಿಗೆ ಜಿಗಿದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭೂಸ್ಪರ್ಶ ಮಾಡಿದ ಬಳಿಕ ದಟ್ಟ ಕಪ್ಪು ಹೊಗೆ ಆ ಪ್ರದೇಶವನ್ನು ಆವರಿಸಿತು. ವಿಮಾನ ಕೆರೆಗೆ ಅಪ್ಪಳಿಸಿದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರು. ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮುಳುಗುಗಾರರು ಸ್ಥಳಕ್ಕೆ ಬಂದರು.
ನಿರ್ಜನ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ‘ಎಕ್ಸ್’ನಲ್ಲಿ ನೀಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ–ಪಾಕ್ ಯುದ್ಧ ನಿಲ್ಲಿಸಿದ್ದು ನಾನು ಎಂದು ಟ್ರಂಪ್ ಪುನರುಚ್ಚರಿಸಿದ್ದು 70ನೇ ಬಾರಿ: ಕಾಂಗ್ರೆಸ್(w/f)
ಹೊಸದಿಲ್ಲಿ, ಜ. 21: ಕಳೆದ ವರ್ಷ ನಡೆದ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದು, ಈ ವಿಷಯದಲ್ಲಿ ಟ್ರಂಪ್ ನೀಡಿರುವ ಹೇಳಿಕೆಗಳ ಸಂಖ್ಯೆ ಈಗ 70ಕ್ಕೆ ತಲುಪಿದೆ ಎಂದು ಹೇಳಿದೆ.
ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ತಮ್ಮ ಎರಡನೇ ಅವಧಿಯ ಅಧ್ಯಕ್ಷರಾದ ಮೊದಲ ವರ್ಷದ ಸಾಧನೆಗಳನ್ನು ವಿವರಿಸುತ್ತಾ, ‘ಕೊನೆಗೊಳ್ಳದ ಯುದ್ಧಗಳು’ ಎಂಬ ಪಟ್ಟಿಯನ್ನು ಉಲ್ಲೇಖಿಸಿದರು. ಅದರಲ್ಲಿ ಭಾರತ–ಪಾಕಿಸ್ತಾನ ಯುದ್ಧವನ್ನೂ ಸೇರಿಸಿದ್ದರು.
ಇದನ್ನು ಉಲ್ಲೇಖಿಸಿ ಬುಧವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘‘ಇತ್ತೀಚೆಗೆವರೆಗೆ ಈ ಸಂಖ್ಯೆ 68 ಆಗಿತ್ತು. ಆದರೆ ಮಂಗಳವಾರ ಟ್ರಂಪ್ ಇದನ್ನು ಎರಡು ಬಾರಿ ಹೇಳಿದ್ದರಿಂದ ಸಂಖ್ಯೆ 70ಕ್ಕೆ ಏರಿದೆ. ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ತಾನು ಎಂಬುದಾಗಿ ಅವರು ಆರಂಭಿಕ ಹೇಳಿಕೆಯಲ್ಲಿ ತಿಳಿಸಿದರು. ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಅದನ್ನು ಪುನರುಚ್ಚರಿಸಿದರು’’ ಎಂದು ತಿಳಿಸಿದ್ದಾರೆ.
2025ರ ಮೇ 10ರಂದು ‘ಆಪರೇಶನ್ ಸಿಂಧೂರ’ ದಿಢೀರನೆ ಮತ್ತು ಅನಿರೀಕ್ಷಿತವಾಗಿ ನಿಂತಿರುವುದಕ್ಕೆ ತಾನೇ ಕಾರಣ ಎಂದು ಪ್ರಧಾನಿಯ ‘ಒಳ್ಳೆಯ ಮಿತ್ರ’ ಇಷ್ಟು ಬಾರಿ ಹೇಳಿದ್ದಾರೆ ಎಂದು ರಮೇಶ್ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ‘‘ಭಾರತ ಮತ್ತು ಪಾಕಿಸ್ತಾನ ತೀವ್ರ ಯುದ್ಧದಲ್ಲಿ ತೊಡಗಿದ್ದವು. ನನ್ನ ಅಂದಾಜಿನಲ್ಲಿ ಅದು ಪರಮಾಣು ಯುದ್ಧವಾಗಿ ವಿಸ್ತರಿಸಬಹುದಿತ್ತು. ನನ್ನ ಮಧ್ಯಪ್ರವೇಶದಿಂದ ಲಕ್ಷಾಂತರ ಜನರ ಪ್ರಾಣಗಳು ಉಳಿದವು’’ ಎಂದು ಹೇಳಿದ್ದಾರೆ.
‘‘10 ತಿಂಗಳ ಅವಧಿಯಲ್ಲಿ ಕೊನೆಗೊಳ್ಳುವ ಸಾಧ್ಯತೆಯಿಲ್ಲದ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ’’ ಎಂಬುದನ್ನೂ ಅವರು ಹೇಳಿದ್ದಾರೆ.