West Bengal | S I R ಗೆ ಹೆದರಿ ಆತ್ಮಹತ್ಯೆ: ಚುನಾವಣಾ ಆಯೋಗದ ವಿರುದ್ಧ ಮೊಕದ್ದಮೆ
Update: 2026-01-21 22:40 IST
ಸಾಂದರ್ಭಿಕ ಚಿತ್ರ | Photo Credit ; PTI
ಕೋಲ್ಕತಾ, ಜ. 21: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಹೆದರಿ 82 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಮೃತರ ಮಗ ಪಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ, ಮೃತಪಟ್ಟ 23 ದಿನಗಳ ಬಳಿಕ ಮೊಕದ್ದಮೆ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
‘‘ಮೊಕದ್ದಮೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ಎಫ್‌ಐಆರ್‌ನಲ್ಲಿ ಯಾವುದೇ ಅಧಿಕಾರಿಯನ್ನು ಹೆಸರಿಸಲಾಗಿಲ್ಲ’’ ಎಂದು ಅವರು ಹೇಳಿದರು.