×
Ad

ಕಾಶ್ಮೀರಿ ಪತ್ರಕರ್ತರಿಗೆ ಪೊಲೀಸ್ ಸಮನ್ಸ್ ಜಾರಿ ದಬ್ಬಾಳಿಕೆಗೆ ಸಮಾನ: ಎಡಿಟರ್ಸ್ ಗಿಲ್ಡ್

Update: 2026-01-21 21:42 IST

ಸಾಂದರ್ಭಿಕ ಚಿತ್ರ | Photo Credit ; PTI

ಶ್ರೀನಗರ, ಜ. 21: ಪತ್ರಕರ್ತರಿಗೆ ಕಳೆದ ವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಮನ್ಸ್ ಜಾರಿ ಮಾಡಿರುವುದನ್ನು ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಬುಧವಾರ ಖಂಡಿಸಿದೆ.

ಈ ಕ್ರಮವು ಮಾಧ್ಯಮಗಳ ಮೇಲಿನ ದಬ್ಬಾಳಿಕೆ ಹಾಗೂ ಬೆದರಿಕೆಗೆ ಸಮಾನವಾಗಿದೆ ಎಂದು ಅದು ಹೇಳಿದೆ.

ಸಮನ್ಸ್ ಜಾರಿ ಮಾಡಿರುವ ಕಾರಣಗಳನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಮಾಧ್ಯಮಗಳು ಪ್ರಮುಖ ಆಧಾರಸ್ತಂಭವಾಗಿರುವ ಪ್ರಜಾಪ್ರಭುತ್ವದಲ್ಲಿ ಇಂತಹ ನಿರಂಕುಶ ಕ್ರಮಕ್ಕೆ ಯಾವುದೇ ಅವಕಾಶವಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ ನಾಲ್ವರು ವರದಿಗಾರರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಇವರಲ್ಲಿ ಒಬ್ಬರು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಹಿರಿಯ ವರದಿಗಾರ ಬಶಾರತ್ ಮಸೂದ್ ಎಂದು ಮೂಲಗಳು ತಿಳಿಸಿವೆ.

ಮಸೂದ್ ಅವರು ಕಾಶ್ಮೀರದಲ್ಲಿ ಮಸೀದಿಗಳು ಹಾಗೂ ಮಸೀದಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವ ಪೊಲೀಸರ ವಿವಾದಾತ್ಮಕ ಕಾರ್ಯಾಚರಣೆ ಕುರಿತು ಇತ್ತೀಚೆಗೆ ವರದಿ ಮಾಡಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವ ಯಾವುದೇ ಕಾರ್ಯಗಳನ್ನು ಮಾಡಬಾರದು ಎಂದು ಪ್ರತಿಪಾದಿಸುವ ಬಾಂಡ್‌ ಗೆ ಸಹಿ ಹಾಕುವಂತೆ ಅವರನ್ನು ಪೊಲೀಸರು ಆಗ್ರಹಿಸಿದ್ದರು. ಆದರೆ, ಮಸೂದ್ ಅವರು ಬಾಂಡ್‌ಗೆ ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಕ್ರಮ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧಾರಿತವಾಗಿಲ್ಲ. ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News