ಮಧ್ಯಪ್ರದೇಶ | ಪರೀಕ್ಷೆಗಳನ್ನು ತಡೆಹಿಡಿಯಲು ಇಂದೋರ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತೆ?
ಸಾಂದರ್ಭಿಕ ಚಿತ್ರ | Photo Credi : freepik.com
ಇಂದೋರ್: ಮಧ್ಯಪ್ರದೇಶದ ಇಂದೋರ್ ನ ಪ್ರತಿಷ್ಠಿತ ಸರಕಾರಿ ಕಾಲೇಜೊಂದರ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತಡೆಹಿಡಿಯಲು ಕಾಲೇಜಿನ ಪ್ರಾಂಶುಪಾಲರು ಮೃತಪಟ್ಟಿದ್ದಾರೆ ಎಂಬ ನಕಲಿ ಪತ್ರವನ್ನು ಸೃಷ್ಟಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಘಟನೆ ನಡೆದಿದೆ ಎಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೆರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಪತ್ರವನ್ನು ಹಂಚಿಕೊಂಡ ಆರೋಪದ ಮೇಲೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರಿ ಹೋಳ್ಕರ್ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ಅನಾಮಿಕ ಜೈನ್ ನೀಡಿದ ದೂರನ್ನು ಆಧರಿಸಿ, ಮೂರನೆ ಸೆಮಿಸ್ಟರ್ ನ ಇಬ್ಬರು ಬಿಸಿಎ ವಿದ್ಯಾರ್ಥಿಗಳ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಭನ್ವರ್ ಕೌನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ವಿದ್ಯಾರ್ಥಿಗಳ ನಿಯಮಿತ ಮೌಲ್ಯಮಾಪನಕ್ಕಾಗಿನ ಆನ್ ಲೈನ್ ಪರೀಕ್ಷೆಯನ್ನು ತಡೆಹಿಡಿಯಲು ಹಾಗೂ ತರಗತಿಗಳನ್ನು ಮುಂದೂಡುವ ಪಿತೂರಿಯ ಭಾಗವಾಗಿ ಕಾಲೇಜಿನ ಪ್ರಾಂಶುಪಾಲರು ಮೃತಪಟ್ಟಿದ್ದಾರೆ ಎಂಬ ನಕಲಿ ಪತ್ರವನ್ನು ಸೃಷ್ಟಿಸಿ, ಅದನ್ನು ಅಕ್ಟೋಬರ್ 14ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಆರೋಪಿ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.