×
Ad

ಗೆಲ್ಲುವುದಕ್ಕಾಗಿ ಗುಲ್ಬದೀನ್ ನಯೀಬ್ ರಿಂದ ಗಾಯದ ನಾಟಕ?

Update: 2024-06-25 21:26 IST

ಗುಲ್ಬದೀನ್ ನಯೀಬ್ |  PC : ICC 

ಹೊಸದಿಲ್ಲಿ : ಐಸಿಸಿ ಟಿ20 ವಿಶ್ವಕಪ್‌ ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನವು ಬಾಂಗ್ಲಾದೇಶವನ್ನು ಡಕ್ವರ್ತ್-ಲೂಯಿಸ್ ನಿಯಮದಡಿ 8 ರನ್‌ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಅದೇ ವೇಳೆ, ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಗುಲ್ಬದೀನ್ ನಯೀಬ್ 12ನೇ ಓವರ್ನಲ್ಲಿ ಮಾಡಿದ ‘‘ನಟನೆ’’ಯು ಬಿಸಿ ಬಿಸಿ ಚರ್ಚೆಯ ವಸ್ತುವಾಗಿದೆ.

ಮಳೆ ಬಾಧಿತ ಪಂದ್ಯದಲ್ಲಿ, ಬಾಂಗ್ಲಾದೇಶವು 19 ಓವರ್ಗಳಲ್ಲಿ 114 ರನ್‌ ಗಳನ್ನು ಗಳಿಸುವ ತನ್ನ ಪರಿಷ್ಕೃತ ಗುರಿಯನ್ನು ಬೆನ್ನತ್ತುತ್ತಿತ್ತು. ಆಗ 12ನೇ ಓವರ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 12ನೇ ಓವರ್ನಲ್ಲಿ ಬಾಂಗ್ಲಾದೇಶವು 7 ವಿಕೆಟ್ಗಳ ನಷ್ಟಕ್ಕೆ 81 ರನ್ ಗಳಿಸಿತ್ತು. ಆ ಹಂತದಲ್ಲಿ ಡಕ್ವರ್ತ್-ಲೂಯಿಸ್ ಲೆಕ್ಕಾಚಾರದಲ್ಲಿ ಅಫ್ಘಾನಿಸ್ತಾನ ಮುಂದಿದೆ ಎನ್ನುವುದನ್ನು ತಂಡದ ಕೋಚ್ ಜೊನಾತನ್ ಟ್ರಾಟ್ ಕಂಡುಕೊಂಡರು. ಆಗ ಇನ್ನೊಮ್ಮೆ ಭಾರೀ ಮಳೆ ಸುರಿಯುವ ಸಾಧ್ಯತೆ ನಿಚ್ಚಳವಾಗಿತ್ತು. ಒಂದು ವೇಳೆ ಮಳೆ ನಿಲ್ಲದಿದ್ದರೆ ಹಾಗೂ ಪಂದ್ಯ ಅಲ್ಲಿಗೇ ಕೊನೆಗೊಂಡರೆ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ ಅಫ್ಘಾನಿಸ್ತಾನ ಗೆಲ್ಲುತ್ತಿತ್ತು.

ಹಾಗಾಗಿ, 12ನೇ ಓವರ್ನ ಮುಂದಿನ ಎಸೆತಕ್ಕೆ ಬೌಲರ್ ಸಜ್ಜಾಗುತ್ತಿರುವಾಗ, ಆಟದ ಗತಿಯನ್ನು ನಿಧಾನಿಸುವಂತೆ ಕೋಚ್ ತನ್ನ ಆಟಗಾರರಿಗೆ ಸಂಜ್ಞೆ ಮಾಡಿದರು. ಆಗ ಸ್ಲಿಪ್‌ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗುಲ್ಬದೀನ್ ನಯೀಬ್ ತನ್ನ ತೊಡೆ (ಹ್ಯಾಮ್ಸ್ಟ್ರಿಂಗ್) ಹಿಡಿದುಕೊಂಡು ಕೆಳಗೆ ಬಿದ್ದರು. ತೀರಾ ನೋವಿನಲ್ಲಿರುವಂತೆ ಮುಖಭಾವ ವ್ಯಕ್ತಪಡಿಸಿದರು. ಅವರನ್ನು ಸ್ಟೇಡಿಯಮ್ ಗೆ ಹೊತ್ತುಕೊಂಡು ಸಾಗಿಸಲಾಯಿತು ಮತ್ತು ಚಿಕಿತ್ಸೆ ನೀಡಲಾಯಿತು.

ಆದರೆ, ಸ್ವಲ್ಪವೇ ಹೊತ್ತಿನಲ್ಲಿ ಮಳೆ ನಿಂತಿತು. ಆಟ ಪುನಾರಂಭಗೊಂಡಿತು. ತಮಾಷೆಯೆಂದರೆ, ಸ್ವಲ್ಪವೇ ಹೊತ್ತಿನ ಹಿಂದೆ ನೋವಿನಿಂದ ಬಳಲುತ್ತಿದ್ದ ನಯೀಬ್ ಬೌಲಿಂಗ್ ಮಾಡಲು ಮೈದಾನಕ್ಕೆ ಮರಳಿದರು. ಅಂತಿಮವಾಗಿ ಅಫ್ಘಾನಿಸ್ತಾನವೇ ಪಂದ್ಯವನ್ನು ಜಯಿಸಿತು.

ಈ ಘಟನೆಯ ಬಗ್ಗೆ ವೀಕ್ಷಕ ವಿವರಣೆಗಾರರ ಹಾಸ್ಯಗೈದರು. ಕ್ರಿಕೆಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವಿನೋದವಾಗಿ ಬರೆದುಕೊಂಡರು.

ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಬರೆದರು: ‘‘ಗುಲ್ಬದೀನ್ ನಯೀಬ್ ಗೆ ಕೆಂಪು ಕಾರ್ಡ್!’’

ಅದಕ್ಕೆ ಬಳಿಕ ನಯೀಬ್ ನಿಗೂಢ ಉತ್ತರವೊಂದನ್ನು ನೀಡಿದ್ದಾರೆ. ‘‘ಕಬೀ ಖುಷಿ ಕಬೀ ಘಮ್ ಮೇಂ ಹೋತಾ ಹೈ ಹ್ಯಾಮ್ಸ್ಟ್ರಿಂಗ್ (ಕೆಲವು ಸಲ ಖುಷಿಯಲ್ಲಿ, ಕೆಲವು ಸಲ ದುಃಖದಲ್ಲಿ ಹ್ಯಾಮ್ಸ್ಟ್ರಿಂಗ್ ಆಗುತ್ತದೆ)’’ ಎಂದು ಅವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News