ಮಹಾರಾಷ್ಟ್ರ | ಅಸೂಯೆಯಿಂದ ಮಗುವನ್ನು ಹತ್ಯೆಗೈಯ್ಯಲು 13 ವರ್ಷದ ಬಾಲಕನಿಗೆ ಪ್ರೇರಣೆಯಾದ ಸಿನಿಮಾ!
ಸಾಂದರ್ಭಿಕ ಚಿತ್ರ
ಪಾಲ್ಘರ್: ಸರಣಿ ಹಂತಕನ ಕುರಿತು ನಿರ್ಮಾಣವಾಗಿದ್ದ ಹಿಂದಿ ಸಿನಿಮಾವೊಂದರಿಂದ ಪ್ರೇರಣೆಗೊಂಡಿರುವ 13 ವರ್ಷದ ಬಾಲಕನೊಬ್ಬ ತಾನು ಅಸೂಯೆ ಪಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ರವಿವಾರ ಮುಂಜಾನೆ ಸುಮಾರು 4.30ರ ವೇಳೆಗೆ ಶ್ರೀರಾಮ್ ನಗರ ಬೆಟ್ಟದ ಮೇಲೆ ಮೃತ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಪೆಲ್ಹರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೆಲ್ಹರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಜಿತೇಂದ್ರ ವಂಕುಟೆ, “ನಾವು ನಲಸೋಪಾರದಿಂದ 13 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದೇವೆ. ಮೃತ ಬಾಲಕಿಯು ಆತನ ಸೋದರ ಸಂಬಂಧಿಯಾಗಿದ್ದಾಳೆ. ಆಕೆಯನ್ನು ಎಲ್ಲರೂ ಮುದ್ದಿಸುತ್ತಾರೆ ಎಂಬ ಅಸೂಯೆಯಿಂದ ಆತ ಆಕೆಯನ್ನು ಹತ್ಯೆಗೈದಿದ್ದಾನೆ” ಎಂದು ತಿಳಿಸಿದ್ದಾರೆ.
“ಶನಿವಾರ ಸಂಜೆಯಿಂದ ಬಾಲಕಿ ನಾಪತ್ರೆಯಾಗಿದ್ದಳು. ನಂತರ, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರದೇಶದಲ್ಲಿನ ಕಂಪನಿಯೊಂದರ ಬಳಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಆರೋಪಿ ಬಾಲಕನು ಆ ಬಾಲಕಿಯನ್ನು ಎಲ್ಲಿಗೋ ಕರೆದೊಯ್ಯುತ್ತಿರುವುದು ಸೆರೆಯಾಗಿತ್ತು. ಮೊದಲಿಗೆ ಪೊಲೀಸರ ದಾರಿ ತಪ್ಪಿಸಲು ಬಾಲಕನು ಯತ್ನಿಸಿದನಾದರೂ, ನಂತರ ತಪ್ಪೊಪ್ಪಿಕೊಂಡನು” ಎಂದು ಅವರು ಹೇಳಿದ್ದಾರೆ.
ಸರಣಿ ಹಂತಕನೊಬ್ಬನ ಕುರಿತು ನಿರ್ಮಾಣವಾಗಿದ್ದ ‘ರಾಮನ್ ರಾಘವ್’ ಎಂಬ ಹಿಂದಿ ಚಲನಚಿತ್ರದಿಂದ ಪ್ರೇರಿತನಾಗಿದ್ದ ಬಾಲಕನು, ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದ ನಂತರ, ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿದ್ದ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯಡಿ ಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಇನ್ಸ್ ಪೆಕ್ಟರ್ ಜಿತೇಂದ್ರ ವಂಕುಟೆ ತಿಳಿಸಿದ್ದಾರೆ.