×
Ad

ನಿಂದಿಸಿ, ಬೆದರಿಸಿ ನಂತರ ಕೆಲಸದಿಂದ ವಜಾಗೊಳಿಸಲಾಯಿತು: ಝೀ ನ್ಯೂಸ್‌ ಮಾಜಿ ನಿರೂಪಕಿ ಝೀನಾ ಸಿದ್ದೀಖಿ ಆರೋಪ

Update: 2024-02-09 16:48 IST

ಝೀನಾ ಸಿದ್ದೀಖಿ | Photo: X/ @ZSiddiki

ಹೊಸದಿಲ್ಲಿ: ಝೀ ನ್ಯೂಸ್‌ನಲ್ಲಿ ನಿರೂಪಕಿ ಆಗಿ ಸೇವೆ ಸಲ್ಲಿಸಿದ್ದ ಝೀನಾ ಸಿದ್ದೀಖಿ ಅವರು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಒಂದರಲ್ಲಿ ತಮ್ಮನ್ನು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಹಾಗೂ ತನಗೆ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ಧಾರೆ. ತಾವು ಝೀ ನ್ಯೂಸ್‌ನಿಂದ ಅಮಾನತುಗೊಳ್ಳಲು ಕಾರಣವಾದ ಆತಂಕಕಾರಿ ಘಟನೆಗಳನ್ನು ಅವರು ವಿವರಿಸಿದ್ದಾರೆ.

ತಾನು ಎಂದಿನಂತೆ ಶನಿವಾರ ಕಚೇರಿಗೆ ಆಗಮಿಸಿದ್ದಾಗಿ ಹಾಗೂ ಆ ದಿನ ಸಾಮಾನ್ಯವಾಗಿ ಹೆಚ್ಚಿನ ಸಿಬ್ಬಂದಿ ರಜೆಯಲ್ಲಿರುತ್ತಾರೆ ಎಂದು ಆಕೆ ಬರೆದಿದ್ದಾರೆ. ನಿರೂಪಕಿ ಆಗಮಿಸಿದ ನಂತರ ಅವರ ವಸ್ತುಗಳನ್ನು ಪರಿಶೀಲಿಸಲಾಯಿತು ಹಾಗೂ ತಾಯಿಯನ್ನು ಸಂಪರ್ಕಿಸುವ ಯತ್ನಗಳಿಗೆ ತಡೆ ಹೇರಲಾಯಿತು ಎಂದು ಅವರು ಆರೋಪಿಸಿದ್ದಾರೆ.

ನಂತರ ತನ್ನನ್ನು ನಿಂದಿಸಿ ಬೆದರಿಸಲಾಯಿತು ಹಾಗೂ ಬಲವಂತದಿಂದ ರಾಜೀನಾಮೆ ಪತ್ರಕ್ಕೆ ಸಹಿ ಹಾಕುವಂತೆ ಮಾಡಲಾಯಿತು. ಒಪ್ಪದೆ ಅಲ್ಲಿಂದ ನಿರ್ಗಮಿಸಲು ಯತ್ನಿಸಿದಾಗ ತಡೆಯಲಾಯಿತು ಹಾಗೂ ಅಂತಿಮವಾಗಿ ಕೆಲಸದಿಂದ ವಜಾಗೊಳಿಸಲಾಯಿತು. ಇದರಿಂದ ತನಗೆ ಆಘಾತ ಮತ್ತು ಬೇಸರವಾಯಿತು ಎಂದೂ ಆಕೆ ಬರೆದಿದ್ದಾರೆ.

ಸಂಸ್ಥೆಯ ಎಚ್‌ಆರ್‌ ಸಂಪರ್ಕಿಸುವ ಯತ್ನ ಹಾಗೂ ಮನವಿಗಳಿಗೆ ಬೆಲೆ ಇರಲಿಲ್ಲ ಹಾಗೂ ಅಂತಿಮವಾಗಿ ಪೊಲೀಸ್‌ ದೂರು ನೀಡಿದ್ದಾಗಿ ಆಕೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಆಕೆ ಎಕ್ಸ್‌ ಪೋಸ್ಟ್‌ ಮಾಡುವ ತನಕ ಎಫ್‌ಐಆರ್‌ ದಾಖಲಾಗಿಲ್ಲ ಎಂದೂ ಆಕೆ ಹೇಳಿದ್ದಾರೆ.

ಈ ವಿಚಾರ ಸಾಕಷ್ಟು ಆಕ್ರೋಶ ಮೂಡಿಸಿದ್ದು ಝೀನಾ ಅವರನ್ನು ನಡೆಸಿಕೊಂಡ ರೀತಿಯ ಕುರಿತು ತನಿಖೆ ನಡೆಸಬೇಕೆಂಬ ಆಗ್ರಹಗಳೂ ಕೇಳಿ ಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News