ಆಕ್ರಮಣಕಾರಿಯಾಗಿ ವರ್ತಿಸಿದ್ದ ದಾಳಿಕೋರ ಆಭರಣಗಳನ್ನು ಕದ್ದಿಲ್ಲ: ಕರೀನಾ ಕಪೂರ್
ಸೈಫ್ ಅಲಿ ಖಾನ್ ಗೆ ಚೂರಿ ಇರಿದ ಆರೋಪಿ (PTI)
ಮುಂಬೈ: ಮುಂಬೈನಲ್ಲಿನ ತಮ್ಮ ಮನೆಯೊಳಗೆ ನುಸುಳಿದ್ದ ದಾಳಿಕೋರ ಘರ್ಷಣೆಯ ಸಂದರ್ಭದಲ್ಲಿ ಆಕ್ರಮಣಕಾರಿಯಾಗಿದ್ದನಾದರೂ, ಯಾವುದೇ ಒಡವೆಗಳನ್ನು ಮುಟ್ಟಿಲ್ಲ ಎಂದು ಸೈಫ್ ಅಲಿ ಖಾನ್ ಪತ್ನಿ ಹಾಗೂ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ದಂಪತಿಗಳ ಅಪಾರ್ಟ್ ಮೆಂಟ್ ನಲ್ಲಿ ನಡೆದಿದ್ದ ದಾಳಿಯ ಸಂಬಂಧ ಪೊಲೀಸರು ನಟಿಯ ಹೇಳಿಕೆಯನ್ನು ಪಡೆದುಕೊಂಡರು ಎಂದು ಅವರು ಹೇಳಿದ್ದಾರೆ.
ಗುರುವಾರ ಮುಂಜಾನೆ ಸದ್ಗುರು ಶರಣ್ ಕಟ್ಟಡದಲ್ಲಿರುವ 12ನೇ ಮಹಡಿಯ ಅಪಾರ್ಟ್ ಮೆಂಟ್ ಗೆ ನುಸುಳಿದ್ದ ದಾಳಿಕೋರ 54 ವರ್ಷದ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ನಟ ಸೈಫ್ ಅಲಿ ಖಾನ್ ಹಲವು ಬಾರಿ ಚಾಕು ಇರಿತಕ್ಕೆ ಒಳಗಾಗಿದ್ದು, ಅವರೀಗ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈಫ್ ಅಲಿ ಖಾನ್ ಜೊತೆಗಿನ ಘರ್ಷಣೆಯಲ್ಲಿ ಆರೋಪಿ ತುಂಬಾ ಆಕ್ರಮಣಕಾರಿಯಾಗಿದ್ದ ವರ್ತಿಸಿದ್ದ. ಆತ ಅವರಿಗೆ ಹಲವು ಬಾರಿ ಚಾಕುವಿನಿಂದ ಇರಿದ. ಆದರೆ, ಮನೆಯಲ್ಲಿದ್ದ ಒಡವೆಗಳನ್ನು ಆತ ಮುಟ್ಟಲಿಲ್ಲ ಎಂದು ಕರೀನಾ ಕಪೂರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ, ಕರೀನಾ ಕಪೂರ್ ಅವರ ಸಹೋದರಿ ಕರಿಷ್ಮಾ ಕಪೂರ್ ತಮ್ಮ ನಿವಾಸಕ್ಕೆ ಅವರನ್ನು ಕೊಂಡೊಯ್ದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾಳಿಕೋರನನ್ನು ಪತ್ತೆ ಹಚ್ಚಲು ಪೊಲೀಸರು 30ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದು, ಘಟನೆ ನಡೆದ 48 ಗಂಟೆಗಳ ನಂತರವೂ ಆತನ ಬಂಧನವಾಗಿಲ್ಲ.