ರೈಲ್ವೆ ಭದ್ರತಾ ಪಡೆಯ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ
ಸೋನಾಲಿ ಮಿಶ್ರಾ (Photo credit:X/@RPF_INDIA)
ಹೊಸದಿಲ್ಲಿ: ರೈಲ್ವೆ ಭದ್ರತಾ ಪಡೆಯ (RPF) ಮಹಾ ನಿರ್ದೇಶಕಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕರಿಸಿದ್ದಾರೆ. ಈ ಹುದ್ದೆಗೆ ಆಯ್ಕೆಯಾದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಶ್ರೇಯಕ್ಕೆ ಅವರು ಭಾಜನರಾಗಿದ್ದಾರೆ.
ಮನೋಜ್ ಯಾದವ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ 1993ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾದ ಸೋನಾಲಿ ಮಿಶ್ರಾರನ್ನು ರೈಲ್ವೆ ಭದ್ರತಾ ಪಡೆಯ ಮಹಾ ನಿರ್ದೇಶಕಿಯನ್ನಾಗಿ ನೇಮಕ ಮಾಡಿ ಜುಲೈ 14ರಂದು ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.
ಇದಕ್ಕೂ ಮುನ್ನ, ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಮಹಾ ನಿರ್ದೇಶಕ(ಆಯ್ಕೆ)ರಾಗಿ ಸೋನಾಲಿ ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರು ಅಕ್ಟೋಬರ್ 31, 2026ರವರೆಗೆ ರೈಲ್ವೆ ಭದ್ರತಾ ಪಡೆಯ ಮಹಾನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಿಬಿಐ, ಬಿಎಸ್ಎಫ್ ನಲ್ಲಿಯೂ ಸೇವೆ ಸಲ್ಲಿಸಿರುವ ಸೋನಾಲಿ, ವಿಶ್ವ ಸಂಸ್ಥೆ ಶಾಂತಪಾಲನಾ ಕಾರ್ಯಾಚರಣೆಯಲ್ಲೂ ಸೇವೆ ಸಲ್ಲಿಸಿದ್ದರು. ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.