×
Ad

ಪ್ರಧಾನಿ ವಿರುದ್ಧ ಸಂಚು ಹೊರಿಸಿದ ಬೇಜವಾಬ್ದಾರಿಯುತ ಆರೋಪ ಹೊರಿಸುವಂತಿಲ್ಲ : ದಿಲ್ಲಿ ಹೈಕೋರ್ಟ್

Update: 2024-04-24 22:29 IST

ದಿಲ್ಲಿ ಹೈಕೋರ್ಟ್ | PC: ANI 

ಹೊಸದಿಲ್ಲಿ : ಪ್ರಧಾನಿ ವಿರುದ್ಧ ಸಂಚು ಹೂಡುವುದು ದೇಶದ್ರೋಹಕ್ಕೆ ಸರಿಸಮಾನವಾದುದಾಗಿದೆ. ಆದರೆ ಪ್ರಧಾನಿ ವಿರುದ್ಧ ಸಂಚು ಹೊರಿಸಿದ ಆರೋಪವನ್ನು ಯಾವುದೇ ವ್ಯಕ್ತಿಯ ವಿರುದ್ಧವೂ ಬೇಜವಾಬ್ದಾರಿಯುತವಾಗಿ ಹೊರಿಸುವಂತಿಲ್ಲವೆಂದು ದಿಲ್ಲಿ ಹೈಕೋರ್ಟ್ ಬುಧವಾರ ಮೌಖಿಕವಾಗಿ ಅಭಿಪ್ರಾಯಿಸಿದೆ.

‘‘ಪ್ರಧಾನಿ ವಿರುದ್ದದ ಸಂಚಿನ ಆರೋಪಗಳನ್ನು ಬೇಜವಾಬ್ದಾರಿಯುತವಾಗಿ ಹೊರಿಸುವಂತಿಲ್ಲ. ದೃಢವಾದ ಹಾಗೂ ಸೂಕ್ತವಾದ ಕಾರಣಗಳನ್ನು ಅದು ಆಧರಿಸಿರಬೇಕು’’ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

ಬಿಜು ಜನತಾದಳದ ಸಂಸದ ಹಾಗೂ ಹಿರಿಯ ನ್ಯಾಯವಾದಿ ಪಿನಾಕಿ ಮಿಶ್ರಾ ಅವರು ಹಿರಿಯ ನ್ಯಾಯವಾದಿ ಜೈ ಆನಂತ ದೆಹದ್ರಾಯಿ ವಿರುದ್ಧ ಹೂಡಿದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಿನಾಕಿ ಮಿಶ್ರಾ ಪರವಾಗಿ ನ್ಯಾಯವಾದಿ ಸಮುದ್ರ ಸಾರಂಗಿ ಹಾಗೂ ದೆಹದ್ರಾಯಿ ಪರವಾಗಿ ನ್ಯಾಯವಾದಿ ರಾಘವ ಅವಸ್ಥಿ ವಾದಿಸಿದ್ದರು.

ಬಿಜೆಡಿ ನಾಯಕರಾದ ಪಿನಾಕಿ ಮಿಶ್ರಾ ಅವರು ಪ್ರಧಾನಿ ವಿರುದ್ಧ ಸಂಚಿನ ಪ್ರಮುಖ ರೂವಾರಿಯಾಗಿದ್ದಾರೆ ಎಂದು ಬಿಂಬಿಸುವಂತಹ ಆರೋಪಗಳನ್ನು ದೆಹದ್ರಾಯಿ ಮಾಡಿದ್ದಾರೆ ಎಂದು ಸಾರಂಗಿ ನ್ಯಾಯಾಲಯದಲ್ಲಿ ಆಪಾದಿಸಿದರು. ಮಿಶ್ರಾ ಅವರ ಪಕ್ಷವಾದ ಬಿಜೆಡಿಯು ಸೈದ್ಧಾಂತಿಕವಾಗಿ ಬಿಜೆಪಿ ಹಾಗೂ ಪ್ರಧಾನಿ ಜೊತೆ ಮೈತ್ರಿಯನ್ನು ಹೊಂದಿದೆ ಎಂದರು.

“ನ್ಯಾಯಾಲಯದ ಆದೇಶ ನೀಡದ ಹೊರತು, ದೆಹದ್ರಾಯಿ ಅವರು ವೃಥಾರೋಪಗಳನ್ನು ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ನ್ಯಾಯಾಲಯವು ಕಟ್ಟುನಿಟ್ಟಿನ ಆದೇಶವನ್ನು ನೀಡುವ ಮೂಲಕ ಮಾತ್ರವೇ ಅದನ್ನು ತಡೆಗಟ್ಟಬಹುದಾಗಿದೆ’’ ಎಂದು ಸಾರಂಗಿ ತಿಳಿಸಿದರು.

ಮಿಶ್ರಾ ಅವರು ಪ್ರಧಾನಿಯವರನ್ನು ಯಾವ ರೀತಿ ಗುರಿ ಮಾಡಿದ್ದಾರೆಂದು ನ್ಯಾಯಾಲಯವು ದೆಹದ್ರಾಯಿ ಅವರ ವಕೀಲರಾದ ಅವಸ್ಥಿಯವರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಅವಸ್ಥಿ ಅವರು, ಬಿಜೆಡಿ ನಾಯಕ ಪಿನಾಕಿ ಮಿಶ್ರಾ ಹಾಗೂ ಟಿಎಂಸಿಯ ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ ನಡುವೆ ನಿಕಟವಾದ ಬಾಂಧವ್ಯವಿದೆ. ಪ್ರಧಾನಿ ವಿರುದ್ಧ ಮಿಶ್ರಾ ಹಾಗೂ ಮೊಯಿತ್ರಾ ಸಂಚು ರೂಪಿಸಿರುವುದನ್ನು ತನ್ನ ಕಕ್ಷಿದಾರನಾದ ದೆಹದ್ರಾಯಿ ಖುದ್ದಾಗಿ ಕಂಡಿದ್ದಾರೆ. ಉದ್ಯಮಿ ದರ್ಶನ್ ಹಿರಾನಂದಾನಿ ನೀಡಿದ ಅಫಿಡವಿಟ್ನಲ್ಲಿಯೂ ಇದು ವ್ಯಕ್ತವಾಗಿದೆ ಎಂದು ಅವಸ್ಥಿ ತಿಳಿಸಿದರು

ಆಗ ಖುದ್ದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ದೆಹದ್ರಾಯಿ ಅವರು, ಪ್ರಧಾನಿಯವರನ್ನು ಗುರಿಯಾಗಿರಿಸಿ ಸಂಚನ್ನು ರೂಪಿಸುವ ಕುರಿತಾದ ಮಿಶ್ರಾ, ಹಿರಾನಂದಾನಿ ಹಾಗೂ ಮೊಯಿತ್ರಾ ನಡುವಿನ ಸಂಭಾಷಣೆಗಳನ್ನು ತಾನು ಖುದ್ದಾಗಿ ವೀಕ್ಷಿಸಿದ್ದೇನೆ ಎಂದು ದೆಹದ್ರಾಯಿ ತಿಳಿಸಿದರು.

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಜಸ್ಮಿತ್ ಸಿಂಗ್ ಅವರು ಪ್ರಧಾನಿ ವಿರುದ್ಧ ಸಂಚು ಹೂಡಲಾಗಿದೆಯೆಂಬ ಆರೋಪವು ಕಳವಳಕಾರಿಯಾಗಿದೆ ಎಂದರು. ಅದನ್ನು ಹಾಗೆಯೇ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. ಪ್ರಧಾನಿ ವಿರುದ್ಧ ಸಂಚು ಹೂಡುವುದೆಂದರೆ ದೇಶದ ವಿರುದ್ಧ ಅಪರಾಧ ಎಸಗುವುದಕ್ಕೆ ಸಮಾನವಾದುದಾಗಿದೆ. ಅದು ರಾಷ್ಟ್ರದ್ರೋಹದ ಕೃತ್ಯವೆನಿಸುತ್ತದೆ. ಹೀಗಾಗಿ ಇಂತಹ ಆರೋಪಗಳನ್ನು ಮಾಡುವಾಗ ತುಂಬಾ ಜಾಗರೂಕತೆ ವಹಿಸಬೇಕಾಗುತ್ತದೆ. ಇಂತಹ ಆರೋಪಗಳನ್ನು ಅಫಿಡವಿಟ್ನಲ್ಲಿ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.

ತನ್ನ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಪ್ರಕಟಿಸದಂತೆ ಹಾಗೂ ಪ್ರಸಾರ ಮಾಡದಂತೆ ದೆಹದ್ರಾಯಿ ಅವರಿಗೆ ಆದೇಶಿಸಬೇಕೆಂದು ಸಂಸದಪಿನಾಕಿ ಮಿಶ್ರಾ ನ್ಯಾಯಾಧೀಶರನ್ನು ಕೋರಿದ್ದರು.

ದೆಹದ್ರಾಯಿ ಅವರು ತನ್ನನ್ನು ಕ್ಯಾನಿಂಗ್ ಲೇನ್ ಹಾಗೂ ಒಡಿಯಾ/ ಒಡಿಯಾ ಬಾಬು ಎಂದು ಟ್ವೀಟ್ ಗಳಲ್ಲಿ ನಿಂದಿಸಿದ್ದರು ಮತ್ತು ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದರು ಎಂದು ಬಿಜೆಡಿ ನಾಯಕ ಆಪಾದಿಸಿದರು.

ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಜೊತೆಗಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಭುಗಿಲೆದ್ದ ಬಳಿಕ ದೆಹದ್ರಾಯಿ ಅವರು ಮಹುವಾ ಮಾತ್ರವಲ್ಲದೆ ತಾನು ಸೇರಿದಂತೆ ಆಕೆಯ ಜೊತೆಗೆ ಖಾಸಗಿ ಬಾಂಧವ್ಯವನ್ನು ಹೊಂದಿದ್ದ ವ್ಯಕ್ತಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆಂದು ಮಿಶ್ರಾ ಅವರು ಅರ್ಜಿಯಲ್ಲಿ ಆಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News