“ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಥಳಿಸಲು ಅನುಮತಿಸುವ ಯಾವುದಾದರೂ ಕಾನೂನು ಇದೆಯೇ?”
ಈ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಲಾಗಿತ್ತೇ ಎಂದು ಸೋಮವಾರದ ವಿಚಾರಣೆ ವೇಳೆ ನ್ಯಾಯಾಲಯ ಕೇಳಿದಾಗ ಪೊಲೀಸರು ಸ್ಪಷ್ಟ ಉತ್ತರ ನೀಡಿರಲಿಲ್ಲ.
Photo: Twitter
ಅಹ್ಮದಾಬಾದ್: ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಲು ಅನುಮತಿಸುವ ಯಾವುದೇ ಕಾನೂನಿನ ನಿಬಂಧನೆಯಿದೆಯೇ ಎಂದು ಗುಜರಾತ್ ಪೊಲೀಸರನ್ನು ರಾಜ್ಯದ ಹೈಕೋರ್ಟ್ ಪ್ರಶ್ನಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಖೇಡಾ ಜಿಲ್ಲೆಯಲ್ಲಿ ಪೊಲೀಸರು ಐದು ಮಂದಿ ಮುಸ್ಲಿಂ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಪ್ರಶ್ನಿಸಿದೆ.
ಅಕ್ಟೋಬರ್ 3 ರ ರಾತ್ರಿ ಖೇಡಾದ ಉಂಧೇಲಾ ಗ್ರಾಮದ ಮಸೀದಿ ಸಮೀಪದ ಗರ್ಬಾ ಸ್ಥಳದತ್ತ ಮುಸ್ಲಿಮರ ಒಂದು ಗುಂಪು ಕಲ್ಲು ತೂರಾಟ ನಡೆಸಿತ್ತು ಎಂದು ಆರೋಪಿಸಲಾಗಿತ್ತು.
ಈ ಘಟನೆಯಲ್ಲಿ ಶಾಮೀಲಾಗಿದ್ದಾರೆನ್ನಲಾದ ಝಹೀರ್ ಮಿಯಾ ಮಲಿಕ್, ಮಕ್ಸೂದ್ ಬನ್ ಮಲಿಕ್, ಸಹದ್ ಮಿಯಾ ಮಲಿಕ್, ಶಕೀಲ್ ಮಿಯಾ ಮಲಿಕ್ ಮತ್ತು ಶಾಹಿದ್ ರಾಜಾ ಮಲಿಕ್ ಎಂಬವರನ್ನು ಎಳೆದು ತಂದ ಪೊಲೀಸರು ಕಂಬವೊಂದಕ್ಕೆ ಕಟ್ಟಿ ಹಾಕಿ ಅವರಿಗೆ ಕೋಲುಗಳಿಂದ ಬಾರಿಸಿದಾಗ ನೆರೆದಿದ್ದ ಜನರು ಹರ್ಷೋದ್ಗಾರಗೈದಿದ್ದರು.
ಕ್ಷಮೆಯಾಚಿಸುವಂತೆ ಈ ವ್ಯಕ್ತಿಗಳಿಗೆ ಪೊಲೀಸರು ಸೂಚಿಸುತ್ತಿರುವುದು ವೀಡಿಯೋಗಳಲ್ಲಿ ಸ್ಪಷ್ಟವಾಗಿತ್ತು. ತಾವು ಪೊಲೀಸ್ ದೌರ್ಜನ್ಯದ ಸಂತ್ರಸ್ತರು, 15 ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಐದು ಮಂದಿ ಗುಜರಾತ್ ಹೈಕೋರ್ಟ್ ಕದ ತಟ್ಟಿದ್ದರು.
ಈ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಲಾಗಿತ್ತೇ ಎಂದು ಸೋಮವಾರದ ವಿಚಾರಣೆ ವೇಳೆ ನ್ಯಾಯಾಲಯ ಕೇಳಿದಾಗ ಪೊಲೀಸರು ಸ್ಪಷ್ಟ ಉತ್ತರ ನೀಡಿರಲಿಲ್ಲ.
“ಇದು ನಿಮ್ಮ ಅಧಿಕಾರಿಯ ಕರ್ತವ್ಯವಾಗಿತ್ತು ಮತ್ತು ನೀವು ಹೀಗೆ ಮಾಡದೇ ಇದ್ದಿದ್ದರೆ ಪರಿಸ್ಥಿತಿ ಕೈಮೀರುತ್ತಿತ್ತು ಎಂದು ಹೇಳಿ ಅಥವಾ ಈ ಘಟನೆ ನಡೆದೇ ಇಲ್ಲ ಮತ್ತು ದಾಖಲೆಯಲ್ಲಿರುವ ಸಾಕ್ಷ್ಯವನ್ನು ಪರಿಗಣಿಸಬಾರದು ಎಂದು ಹೇಳಿ,” ಎಂದು ನ್ಯಾಯಾಲಯ ಸಾರ್ವಜನಿಕ ಅಭಿಯೋಜಕ ಮಿತೇಶ್ ಅಮೀನ್ ಅವರಿಗೆ ಹೇಳಿತು.
ಆಗ ಅವರು ಸ್ಪಷ್ಟ ಉತ್ತರ ನೀಡದೆ ಮುಸ್ಲಿಂ ಅರ್ಜಿದಾರರು ಸುಳ್ಳು ಮಾಹಿತಿ ನೀಡಿದ್ದಾರೆ ಹಾಗೂ ಮುಸ್ಲಿಮರು ಸ್ಥಳೀಯ ಹಿಂದುಗಳನ್ನು ಬೆದರಿಸುವ ಸಂಚು ಹೂಡಿದ್ದರು ಎಂದು ಆರೋಪಿಸಿದರು.
“ಹೋಳಿ ಸಂದರ್ಭವೂ ಇಲ್ಲಿ ಒಂದು ಘಟನೆ ನಡೆದಿತ್ತು. ಇದೊಂದು ಸೂಕ್ಷ್ಮ ಪ್ರದೇಶ, ಸಂಚಿನ ಭಾಗವಾಗಿ ಹಿಂದುಗಳ ಹಬ್ಬಕ್ಕೆ ಅಡ್ಡಿಯುಂಟು ಮಾಡಲು ಕಲ್ಲು ತೂರಾಟ ನಡೆಸಿದ್ದರು,” ಎಂದು ಅವರು ಹೇಳಿದರು.
ಘಟನೆಯ ಸಮಯ, ಆರೋಪಿಗಳ ಬಂಧನದ ಸಮಯ ಮತ್ತು ಅರ್ಜಿಯಲ್ಲಿ ಆರೋಪಿತರು ತಿಳಿಸಿದ ಸಮಯದಲ್ಲಿ ವ್ಯತ್ಯಾಸವಿದೆ ಎಂದು ಅವರು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು “ಸಮಯದ ವ್ಯತ್ಯಾಸ ಹಾಗಿರಲಿ, ಥಳಿಸಬಹುದೇ? ಆರೋಪಿಯನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕರೆದುರು ಲಾಠಿಯೇಟು ನೀಡಲು ಅನುಮತಿಸುವ ಯಾವುದೇ ಕಾನೂನನ್ನು ನೀವು ಉಲ್ಲೇಖಿಸಬಹುದೇ?” ಎಂದು ಪ್ರಶ್ನಿಸಿದರು.