ಬುಧವಾರದಿಂದ ವಿಮಾನ ಹಾರಾಟ ಸಾಮಾನ್ಯ ಸ್ಥಿತಿಗೆ: ಏರ್ ಇಂಡಿಯಾ
Update: 2025-06-24 20:46 IST
ಏರ್ ಇಂಡಿಯಾ | PC : PTI
ಹೊಸದಿಲ್ಲಿ: ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವಾಯುಪ್ರದೇಶಗಳು ನಿಧಾನವಾಗಿ ಮರುತೆರೆದುಕೊಳ್ಳುತ್ತಿದ್ದು, ಮಂಗಳವಾರದಿಂದ ಆ ವಲಯಕ್ಕೆ ಹಂತಗಳಲ್ಲಿ ವಿಮಾನ ಯಾನವನ್ನು ಪುನರಾರಂಭಿಸುವುದಾಗಿ ಏರ್ ಇಂಡಿಯಾ ಹೇಳಿದೆ.
ಮಧ್ಯಪ್ರಾಚ್ಯಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಹಾರಾಟ ಬುಧವಾರದ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ನಿರೀಕ್ಷೆಯನ್ನು ಅದು ವ್ಯಕ್ತಪಡಿಸಿದೆ.
ಯುರೋಪ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಯಾನವನ್ನೂ ಮಂಗಳವಾರದಿಂದ ಹಂತಗಳಲ್ಲಿ ಪುನರಾರಂಭಿಸಲಾಗಿದೆ. ಅದೇ ವೇಳೆ, ಅಮೆರಿಕದ ಪೂರ್ವ ಕರಾವಳಿ ಮತ್ತು ಕೆನಡಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ಹಾರಾಟವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪುನರಾರಂಭಿಸಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ.