ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು: ಕಾಂಗ್ರೆಸ್ ಸಂಸದ ಉನ್ನಿತಾನ್
ರಾಜಮೋಹನ್ ಉನ್ನಿತಾನ್ \ Photo : Facebook/@Rajmohan Unnithan
ಕಾಸರಗೋಡು: ಗಾಝಾ ಪಟ್ಟಿಯನ್ನು ಆಕ್ರಮಿಸಿ ಯುದ್ಧಾಪರಾಧ ಎಸಗುತ್ತಿರುವ ಇಸ್ರೇಲ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಯಾವುದೇ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಸರಗೋಡು ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ.23 ರಂದು ಕೋಝಿಕ್ಕೋಡ್ ನಲ್ಲಿ ಕೆಪಿಸಿಸಿ(ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ) ಫೆಲಸ್ತೀನಿನ ಮೇಲೆ ಇಸ್ರೇಲ್ ಆಕ್ರಮಣ ವಿರೋಧಿಸಿ ಆಯೋಜಿಸಿರುವ ರ‍್ಯಾಲಿಗೆ ಪೂರ್ವಭಾವಿಯಾಗಿ ಕಾಸರಗೋಡಿನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಉನ್ನಿತಾನ್ ಮಾತಾನಾಡಿದರು. ಯುದ್ಧಾಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ‘ನ್ಯೂರೆಂಬರ್ಗ್ ಮಾದರಿ’ಯ ಹತ್ಯಾಕಾಂಡದಂತೆ ಗುಂಡಿಕ್ಕಿ ಕೊಲ್ಲಬೇಕು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧಾಪರಾಧಿಗಳ ಮೇಲೆ ನ್ಯೂರೆಂಬರ್ಗ್ ಮಾದರಿ ಬಳಸಲಾಗಿತ್ತು. ಆದೇ ರೀತಿ ಇದೀಗ ಇಸ್ರೇಲ್ ಪ್ರಧಾನಿ ವಿರುದ್ಧ ನ್ಯೂರೆಂಬರ್ಗ್ ಮಾದರಿಯನ್ನು ಬಳಸುವ ಸಮಯ ಬಂದಿದೆ. ಇಡೀ ವಿಶ್ವದ ಮುಂದೆ ನೆತನ್ಯಾಹು ಯುದ್ಧಾಪರಾಧಿಯಾಗಿ ನಿಂತಿದ್ದಾರೆ’ ಎಂದು ರಾಜಮೋಹನ್ ಉನ್ನಿತಾನ್ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.