ಭವಿಷ್ಯ ನಿಧಿ ಬಡ್ಡಿ ದರ 8.15 ರಿಂದ 8.25%ಕ್ಕೆ ಹೆಚ್ಚಿಸಲು ಶಿಫಾರಸು
Photo:epfindia.gov.in
ಹೊಸದಿಲ್ಲಿ : 2023-24ರ ಸಾಲಿನ ಬಡ್ಡಿ ದರವನ್ನು 8.15 ಶೇಕಡದಿಂದ 8.25 ಶೇಕಡಕ್ಕೆ ಏರಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶನಿವಾರ ಶಿಫಾರಸು ಮಾಡಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಇಪಿಎಫ್ಒ ಸುಮಾರು ಆರು ಕೋಟಿ ಸಕ್ರಿಯ ಚಂದಾದಾರರನ್ನು ಹೊಂದಿದ್ದು, ದೇಶದ ಅತಿ ದೊಡ್ಡ ನಿವೃತ್ತಿ ನಿಧಿಯಾಗಿದೆ.
20ಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಲ್ಲಿ, ತಿಂಗಳಿಗೆ 15,000 ರೂಪಾಯಿವರೆಗೆ ವೇತನ ಹೊಂದಿರುವ ಉದ್ಯೋಗಿಗಳು ಭವಿಷ್ಯ ನಿಧಿ ಖಾತೆಗಳನ್ನು ಹೊಂದುವುದು ಕಡ್ಡಾಯವಾಗಿದೆ. ಉದ್ಯೋಗಿಯ ಮೂಲ ವೇತನದ ಕನಿಷ್ಠ 12 ಶೇಕಡದಷ್ಟು ಮೊತ್ತವನ್ನು ಕಡ್ಡಾಯವಾಗಿ ಕಡಿತಗೊಳಿಸಿ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡಬೇಕು. ಅಷ್ಟೇ ಪ್ರಮಾಣದ ಮೊತ್ತವನ್ನು ಕಂಪೆನಿಯ ಮಾಲೀಕರೂ ಹಾಕಬೇಕು.
ಶನಿವಾರ ನಡೆದ ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಟ್ರಸ್ಟೀಗಳ ಮಂಡಳಿ ಸಭೆಯಲ್ಲಿ ಬಡ್ಡಿ ದರವನ್ನು ಹೆಚ್ಚಿಸಬೇಕೆನ್ನುವ ಶಿಫಾರಸನ್ನು ಮಾಡಲಾಯಿತು.
ಈ ಶಿಫಾರಸನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು. ಸರಕಾರದ ಅನುಮೋದನೆಯ ಬಳಿಕ, 2023-24ರ ಸಾಲಿನ ಭವಿಷ್ಯ ನಿಧಿ ಬಡ್ಡಿಯನ್ನು ಖಾತೆಗೆ ಸೇರಿಸಲಾಗುವುದು.
ಈ ಶಿಫಾರಸು ಅನುಮೋದನೆಗೊಂಡರೆ, ಅದು ಕಳೆದ ಮೂರು ವರ್ಷಗಳ ಅವಧಿಯಲ್ಲಿನ ಗರಿಷ್ಠ ಭವಿಷ್ಯ ನಿಧಿ ಬಡ್ಡಿದರವಾಗುತ್ತದೆ. ಈ ಹಿಂದಿನ ಗರಿಷ್ಠ ಭವಿಷ್ಯ ನಿಧಿ ಬಡ್ಡಿ ದರ 2019-20ರ ಅವಧಿಯಲ್ಲಿ ಚಾಲ್ತಿಯಲ್ಲಿದ್ದ 8.5% ಆಗಿತ್ತು.