ಧನ್ಕರ್ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ | ಚುನಾವಣಾಧಿಕಾರಿಯಾಗಿ ರಾಜ್ಯಸಭೆಯ ಮಹಾ ಕಾರ್ಯದರ್ಶಿ ನೇಮಕ
ಜಗದೀಪ್ ಧನ್ಕರ್ | PTI
ಹೊಸದಿಲ್ಲಿ,ಜು.25: ಚುನಾವಣಾ ಆಯೋಗವು ಶುಕ್ರವಾರ ರಾಜ್ಯಸಭೆಯ ಮಹಾ ಕಾರ್ಯದರ್ಶಿ ಪಿ.ಸಿ.ಮೋದಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕಗೊಳಿಸಿದ್ದು,ಇದರೊಂದಿಗೆ ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ.
ಧನ್ಕರ್ ತನ್ನ ಅಧಿಕಾರಾವಧಿ ಮುಗಿಯಲು ಇನ್ನೂ ಎರಡು ವರ್ಷ ಮತ್ತು 20 ದಿನಗಳು ಬಾಕಿಯಿದ್ದಾಗಲೇ ಸೋಮವಾರ ರಾತ್ರಿ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದು ಚುನಾವಣೆಯನ್ನು ಅಗತ್ಯವಾಗಿಸಿದೆ.
ಗೃಹ ಸಚಿವಾಲಯವು ಮಂಗಳವಾರ ಧನ್ಕರ್ ರಾಜೀನಾಮೆಯನ್ನು ಅಧಿಸೂಚಿಸಿದ ಬಳಿಕ ಚುನಾವಣಾ ಆಯೋಗವು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕಾನೂನು ಮತ್ತು ನ್ಯಾಯ ಸಚಿವಾಲಯದ ಜೊತೆ ಸಮಾಲೋಚನೆ ಹಾಗೂ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ಅವರ ಒಪ್ಪಿಗೆಯ ಬಳಿಕ ರಾಜ್ಯಸಭೆಯ ಮಹಾ ಕಾರ್ಯದರ್ಶಿಗಳನ್ನು ಉಪರಾಷ್ಟ್ರಪತಿ ಚುನಾವಣೆಗೆ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಆಯೋಗವು ರಾಜ್ಯಸಭೆಯ ಜಂಟಿ ಕಾರ್ಯದರ್ಶಿ ಗರಿಮಾ ಜೈನ್ ಮತ್ತು ರಾಜ್ಯಸಭಾ ಸಚಿವಾಲಯದ ನಿರ್ದೇಶಕ ವಿಜಯಕುಮಾರ ಅವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕಗೊಳಿಸಿದೆ.