×
Ad

ಜೈಪುರ ಸಾಹಿತ್ಯ ಉತ್ಸವಕ್ಕೆ ಚಾಲನೆ

ರಾಜಸ್ಥಾನ ರಾಜಧಾನಿಗೆ ಹರಿದುಬಂದ ವಿಶ್ವವಿಖ್ಯಾತ ಸಾಹಿತಿ–ಕಲಾವಿದರ ದಂಡು

Update: 2026-01-15 21:00 IST

 ಸಾಂದರ್ಭಿಕ ಚಿತ್ರ | Photo : PTI 

ಜೈಪುರ, ಜ.15: ವಿಶ್ವಪ್ರಸಿದ್ಧ ಜೈಪುರ ಸಾಹಿತ್ಯ ಉತ್ಸವ (ಜೆಎಲ್‌ಎಫ್) ಬುಧವಾರ ಆರಂಭಗೊಂಡಿದ್ದು, ಸಾಹಿತ್ಯಾಸಕ್ತರ ದಂಡೇ ರಾಜಸ್ಥಾನದ ರಾಜಧಾನಿ ನಗರಕ್ಕೆ ಹರಿದುಬರುತ್ತಿದೆ. ಜನವರಿ 19ರವರೆಗೆ ನಡೆಯಲಿರುವ ಐದು ದಿನಗಳ ‘ಸಾಹಿತ್ಯ ಜಾತ್ರೆ’ಗೆ ಜಗತ್ತಿನಾದ್ಯಂತದ ಚಿಂತಕರು, ಲೇಖಕರು, ಕಲಾವಿದರು ಹಾಗೂ ಸಾಹಿತ್ಯಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ.

ಜೈಪುರದ ಪ್ರತಿಷ್ಠಿತ ಕ್ಲಾರ್ಕ್ಸ್ ಆ್ಯಮೆರ್‌ ನಲ್ಲಿ ಐದು ದಿನಗಳ ಕಾಲ ನಡೆಯಲಿರುವ ಈ ಸಾಹಿತ್ಯ ಉತ್ಸವದಲ್ಲಿ ವಿಶ್ವವಿಖ್ಯಾತ ಸಾಹಿತಿಗಳು ಸಂವಾದ ಹಾಗೂ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ತೆರೆದ ರಂಗಮಂದಿರಗಳು, ಆಹಾರ ಮತ್ತು ವಾಣಿಜ್ಯ ಮಳಿಗೆಗಳನ್ನು ಕೂಡ ಸ್ಥಾಪಿಸಲಾಗಿದೆ.

2006ರಲ್ಲಿ ಆರಂಭಗೊಂಡಾಗಿನಿಂದ ಜೈಪುರ ಸಾಹಿತ್ಯ ಉತ್ಸವವು ಭಾಷಾ ವೈವಿಧ್ಯತೆ, ಭಾಷಾಂತರ ಸಾಹಿತ್ಯ ಹಾಗೂ ಬಹುಸಂಸ್ಕೃತಿಯ ಸಾಹಿತ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಲಿತ ಸಾಹಿತ್ಯವನ್ನೂ ಪೋಷಿಸಿದೆ. ಈ ಸಲದ ಜೈಪುರ ಸಾಹಿತ್ಯ ಉತ್ಸವದಲ್ಲಿ ಸ್ಪ್ಯಾನಿಷ್, ಅರೇಬಿಕ್, ಜಪಾನಿ ಇತ್ಯಾದಿ ಸಾಹಿತ್ಯಗಳಿಗೂ ಪ್ರೋತ್ಸಾಹ ನೀಡಲಾಗಿದೆ.

ಭೌಗೋಳಿಕ ರಾಜಕೀಯ, ಕವನ, ಕಥಾಸಾಹಿತ್ಯ ಹಾಗೂ ಕಥಾವಾಚನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಚಿಂತನ–ಮಂಥನಗಳೂ ನಡೆಯಲಿವೆ.

*ವಿಶ್ವವಿಖ್ಯಾತ ಸಾಹಿತ್ಯ ದಿಗ್ಗಜರ ಸಂಗಮ

ಈ ಸಲದ ಜೈಪುರ ಸಾಹಿತ್ಯೋತ್ಸವವು ಹಲವಾರು ವಿಶ್ವವಿಖ್ಯಾತ ಸಾಹಿತಿಗಳ ಸಂಗಮಕ್ಕೆ ಸಾಕ್ಷಿಯಾಗಲಿದೆ. ನೊಬೆಲ್ ಪುರಸ್ಕೃತ ಸಾಹಿತಿಗಳಾದ ಇಶ್ತರ್ ಡ್ಯುಫ್ಲೊ ಹಾಗೂ ಕೈಲಾಶ್ ಸತ್ಯಾರ್ಥಿ, ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ ಹಾಗೂ ಡೈಸಿ ರಾಕ್‌ವೆಲ್, ಸಾಹಿತಿ–ರಾಜಕಾರಣಿ ಡಾ.ಕರಣ್ ಸಿಂಗ್ ಕೂಡ ಭಾಗವಹಿಸುತ್ತಿದ್ದಾರೆ. ಪೊಲ್ಯಾಂಡ್ ಪ್ರಧಾನಿ ರ್ಯಾಡೊಸ್ಲಾವ್ ಸಿಕ್ರೋಸ್ಕಿ ಕೂಡ ಪಾಲ್ಗೊಳ್ಳಲಿದ್ದಾರೆ. ನಮಿತಾ ಗೋಖಲೆ ಹಾಗೂ ವಿಲಿಯಂ ಡಾಲ್ರಿಂಪಲ್ ಈ ಸಾಹಿತ್ಯ ಉತ್ಸವದ ನಿರ್ದೇಶಕರಾಗಿದ್ದಾರೆ.

"ಜೈಪುರ ಸಾಹಿತ್ಯ ಉತ್ಸವದಲ್ಲಿ ಬಹುಭಾಷಾ ಸಂವಾದಗಳ ಸಡಗರವನ್ನು ಆಚರಿಸಲಿದ್ದೇವೆ. ಜಪಾನ್‌ನ ಮಾಂಗಾ ಕಾಮಿಕ್ಸ್‌ನಿಂದ ಹಿಡಿದು ಭಾರತದ 22 ರಾಷ್ಟ್ರೀಯ ಭಾಷೆಗಳ ಭವ್ಯ ಪರಂಪರೆವರೆಗೆ ಚರ್ಚಿಸಲಿದ್ದೇವೆ. ನಮ್ಮ ಭೂಗ್ರಹದ ಹಾಗೂ ಅದರಾಚೆಯ ಜಗತ್ತುಗಳ ಸಮೃದ್ಧ ವೈವಿಧ್ಯತೆಯ ಬಗ್ಗೆಯೂ ಮಾತನಾಡಲಿದ್ದೇವೆ. ಜಗತ್ತಿನ ಕೆಲವು ಮಹಾನ್ ಸಾಹಿತಿಗಳ ಸ್ಫೂರ್ತಿಯೊಂದಿಗೆ ಈ ಉತ್ಸಾಹವನ್ನು ಹಂಚಿಕೊಳ್ಳಲಿದ್ದೇವೆ", ಎಂದು ಜೈಪುರ ಲಿಟ್ ಫೆಸ್ಟಿವಲ್ ನಿರ್ದೇಶಕಿ ನಮಿತಾ ಗೋಖಲೆ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News