×
Ad

ರಾಜಸ್ಥಾನ | CA ಪರೀಕ್ಷೆಯಲ್ಲಿ ತೇರ್ಗಡೆಯಾದ 71 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ!

Update: 2025-07-12 22:24 IST

Credit: LinkedIn /@Nikhilesh Kataria

ಜೈಪುರ: ತಮ್ಮ ವಯಸ್ಸಿನ ಅರ್ಧ ಭಾಗ ತಮ್ಮನ್ನು ಕೊರೆಯುತ್ತಿದ್ದ ಲೆಕ್ಕಪರಿಶೋಧನೆ(CA) ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂಬ ಕನಸನ್ನು ತಮ್ಮ 71ನೇ ವಯಸ್ಸಿನಲ್ಲಿ ಜೈಪುರದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ತಾರಾಚಂದ್ ಅಗರ್ವಾಲ್ ಈಡೇರಿಸಿಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ.

ಹನುಮಾನ್ ಗಢದ ರೈತ ಮತ್ತು ಉದ್ಯಮಿಯ ಕುಟುಂಬದಲ್ಲಿ ಜನಿಸಿದ ತಾರಾಚಂದ್ ಅಗರ್ವಾಲ್, ತಮ್ಮ ಪೋಷಕರ ಎಂಟು ಮಕ್ಕಳ ಪೈಕಿ ನಾಲ್ಕನೆಯ ಪುತ್ರರಾಗಿದ್ದಾರೆ.

ಸಾಂಗ್ರಿಯಾದಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ ತಾರಾಚಂದ್ ಅಗರ್ವಾಲ್, 1974ರಲ್ಲಿ ದರ್ಶನಾರನ್ನು ವಿವಾಹವಾದರು. ನಂತರ, 1976ರಲ್ಲಿ ಸ್ಟೇಟ್ ಬ್ಯಾಂಕ್ ಬಿಕಾನೇರ್ ಮತ್ತು ಜೈಪುರ್(ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ಗೆ ಗುಮಾಸ್ತರಾಗಿ ಸೇರ್ಪಡೆಯಾಗಿದ್ದರು.

ತಮ್ಮ 38 ವರ್ಷಗಳ ಬ್ಯಾಂಕ್ ಸೇವೆಯ ನಂತರ, 2014ರಲ್ಲಿ ಅವರು ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ನವೆಂಬರ್ 2020ರಲ್ಲಿ ತಮ್ಮ ಪತ್ನಿ ನಿಧನರಾದ ನಂತರ, ಅವರು ಪುಸ್ತಕಗಳ ವಾಚನದತ್ತ ತಮ್ಮ ಗಮನ ಹರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, “ಆಗ ನನಗೆ ತುಂಬಾ ಏಕಾಂಗಿತನದ ಅನುಭವವಾಗುತ್ತಿತ್ತು. ನನ್ನೊಂದಿಗೆ ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿದ್ದರೂ, ನಾನು ಅವರತ್ತ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಸ್ಮರಿಸಿದ್ದಾರೆ.

ಬಳಿಕ, ತಮ್ಮ ಮಕ್ಕಳ ಸಲಹೆಯಂತೆ ಅವರು ಭಗದ್ಗೀತೆ ವಾಚನದತ್ತ ಮುಖ ಮಾಡಿದ್ದು, ಅಲ್ಲಿ ಮತ್ತೆ ಕಲಿಕೆಯತ್ತ ಪ್ರೀತಿ ಬೆಳೆಸಿಕೊಂಡಿದ್ದಾರೆ.

ನಾನು ಪಿಎಚ್ಡಿ ಮಾಡುತ್ತೇನೆ ಎಂದು ಅವರು ತಮ್ಮ ಮಕ್ಕಳ ಬಳಿ ಪ್ರಸ್ತಾಪವಿಟ್ಟಾಗ, ಅವರ ಮಕ್ಕಳು ಇನ್ನೂ ಸವಾಲಿನ ಪ್ರಸ್ತಾಪವನ್ನು ಅವರ ಮುಂದಿರಿಸಿದ್ದಾರೆ. “ನೀವು ಲೆಕ್ಕ ಪರಿಶೋಧನೆ ಮಾಡಿ. ಅದು ಕಠಿಣವಾಗಿದ್ದರೂ, ನಿಮಗೆ ಹೆಸರು ತಂದುಕೊಡುತ್ತದೆ” ಎಂದು ನನ್ನ ಮೊಮ್ಮಗಳು ನನಗೆ ಸಲಹೆ ನೀಡಿದಳು. “ನೀವು ನನಗೆ ಮಾರ್ಗದರ್ಶನ ನೀಡಬಹುದಾದರೆ, ನೀವೇ ಏಕೆ ಲೆಕ್ಕ ಪರಿಶೋಧನೆ ಮಾಡಬಾರದು?” ಎಂದು ಆಕೆ ನನ್ನನ್ನು ಹುರಿದುಂಬಿಸಿದಳು ಎಂದು ಅವರು ತಮಗೆ ಸ್ಪೂರ್ತಿ ಸಿಕ್ಕ ಘಟನೆಯನ್ನು ನೆನಪಿಸಿಕೊಂಡರು.

ತಮ್ಮ ಮೊಮ್ಮಗಳ ಪ್ರೋತ್ಸಾಹದಿಂದ ಉತ್ತೇಜಿತರಾದ ತಾರಾಚಂದ್ ಅಗರ್ವಾಲ್, ಜುಲೈ 2021ರಲ್ಲಿ ಲೆಕ್ಕ ಪರಿಶೋಧನೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ನಂತರ, ಮೇ 2022ರಲ್ಲಿ ಅವರು ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಬಳಿಕ, ಜನವರಿ 2023ರಲ್ಲಿ ಇಂಟರ್ ಮೀಡಿಯೇಟ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರೈಸಿದ್ದಾರೆ. ಮೇ 2024ರಲ್ಲಿ ತಮ್ಮ ಪ್ರಪ್ರಥಮ ಅಂತಿಮ ಪರೀಕ್ಷೆಯ ಪ್ರಯತ್ನದಲ್ಲಿ ವಿಫಲಗೊಂಡ ನಂತರ, ಈ ವರ್ಷ ಅವರು ಅದರಲ್ಲಿ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫಲಿತಾಂಶವನ್ನು ಜುಲೈ 6ರಂದು ಭಾರತೀಯ ಲೆಕ್ಕ ಪರಿಶೋಧನೆ ಸಂಸ್ಥೆ (ICAI) ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.

ತಮಗೆ ತೋಳಿನ ನೋವಿದ್ದರೂ, ಪ್ರತಿ ದಿನ 10 ಗಂಟೆಗಳವರೆಗೆ ಅಧ್ಯಯನ ನಡೆಸಿರುವ ತಾರಾಚಂದ್ ಅಗರ್ವಾಲ್, ಪರೀಕ್ಷೆಯ ಸಿದ್ಧತೆಗಾಗಿ ಗಂಟೆಗಟ್ಟಲೆ ಬರೆಯವುದನ್ನು ಅಭ್ಯಾಸ ಮಾಡಿದ್ದಾರೆ. ಪುಸ್ತಕಗಳು ಹಾಗೂ ಯೂಟ್ಯೂಬ್ ವಿಡಿಯೊಗಳನ್ನು ಹೊರತುಪಡಿಸಿ ಬೇರಾವುದೇ ವೃತ್ತಿಪರರ ನೆರವು ಪಡೆಯದೆ, ಅವರು ತಮ್ಮ 71ನೇ ವರ್ಷದಲ್ಲಿ ಲೆಕ್ಕ ಪರಿಶೋಧನೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ, ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

“ನನ್ನ ಈ ಸಾಧನೆಯಲ್ಲಿ ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳ ಪ್ರೋತ್ಸಾಹ ಮಹತ್ವದ್ದಾಗಿತ್ತು. ಅವರು ನನಗಾಗಿ ಲ್ಯಾಪ್ ಟಾಪ್ ಖರೀದಿಸಿ ತಂದರು. ಲೆಕ್ಕ ಪರಿಶೋಧನೆ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ನನಗೆ ನೆರವು ನೀಡಿದರು ಹಾಗೂ ಪ್ರತಿ ಹಂತದಲ್ಲೂ ನನಗೆ ಬೆಂಬಲ ನೀಡಿದರು” ಎಂದು ತಾರಾಚಂದ್ ಅಗರ್ವಾಲ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

“ನಾನು ಯಾವುದೇ ಕೆಲಸವನ್ನು ಮಾಡುವಾಗ, ಅದನ್ನು ನಾನು ದೃಢವಾಗಿ ಮಾಡುತ್ತೇನೆ. ಇದೇ ನನಗೆ ಭಗವದ್ಗೀತೆ ಕಲಿಸಿದ್ದು” ಎಂದೂ ಅವರು ಹೇಳುತ್ತಾರೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News