×
Ad

ಜಾಮಿಯಾ ವಿವಿ ಪ್ರತಿಭಟನೆ | 17 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ AISA; ತರಗತಿಗಳ ಬಹಿಷ್ಕಾರಕ್ಕೆ ಕರೆ

Update: 2025-02-15 21:02 IST

PC : PTI 

ಹೊಸದಿಲ್ಲಿ: ಇಬ್ಬರು ಪಿಎಚ್ಡಿ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದನ್ನು ಪ್ರತಿಭಟಿಸಿದ್ದಕ್ಕೆ 17 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ, ಸೋಮವಾರದಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ತರಗತಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ.

ವಿದ್ಯಾರ್ಥಿಗಳ ಅಮಾನತಿನ ಕುರಿತು ವಿಶ್ವವಿದ್ಯಾಲಯ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅನಧಿಕೃತವಾಗಿ ಪ್ರತಿಭಟನೆಯೊಂದರ ನೇತೃತ್ವ ವಹಿಸಿದ್ದರು ಎಂದು ಆರೋಪಿಸಿ, ಇಬ್ಬರು ಪಿಎಚ್ಡಿ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯ ಅಮಾನತುಗೊಳಿಸಿದ್ದರಿಂದ ಈ ವಿವಾದ ಭುಗಿಲೆದ್ದಿದೆ. ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಈ ಪ್ರತಿಭಟನೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗಿದ್ದು, ಸೆಂಟ್ರಲ್ ಕ್ಯಾಂಟೀನ್ ಧ್ವಂಸ ಹಾಗೂ ಭದ್ರತಾ ಸಲಹೆಗಾರರ ಕಚೇರಿಯ ದ್ವಾರದ ಮುರಿತ ಸೇರಿದಂತೆ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಾರೋಪ ಮಾಡಿದೆ.

ಆದರೆ, ಆಡಳಿತ ಮಂಡಳಿಯು ಭಿನ್ನಮತವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಹೋರಾಟನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಧ್ವಂಸ, ಅನಧಿಕೃತ ಪ್ರತಿಭಟನೆ ಹಾಗೂ ವಿಶ್ವವಿದ್ಯಾಲಯಕ್ಕೆ ಕಳಂಕ ತಂದ ಕೃತ್ಯಗಳಲ್ಲಿ ಭಾಗಿಯಾಗಿದ್ದೇವೆ ಎಂದು ಆರೋಪಿಸಿ ನಮಗೆ ಅಮಾನತು ನೋಟಿಸ್ ಗಳನ್ನು ರವಾನಿಸಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸುವುದರೊಂದಿಗೆ ಜಾಮಿಯಾ ವಿವಿಯ ಕ್ರಮವು ವಿವಾದಕ್ಕೆ ಗುರಿಯಾಗಿದೆ.

ಆಡಳಿತ ಮಂಡಳಿಯು ರಾತ್ರೋರಾತ್ರಿ 17 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು, ಇದರಿಂದಾಗಿ ವಿಶ್ವವಿದ್ಯಾಲಯದ ವಿವಿಧ ವಿಭಾಗದ ವಿದ್ಯಾರ್ಥಿಗಳು ತಾವು ತರಗತಿ ಬಹಿಷ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News