ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಎಂಎಂ ಮಳೆ
ಶ್ರೀನಗರ, ಆ. 28: ನಿರಂತರ ಹಾಗೂ ಭಾರೀ ಮಳೆಯಿಂದ ನೆರೆ ಪರಿಸ್ಥಿತಿ ಎದುರಿಸುತ್ತಿರುವ ಜಮ್ಮು 24 ಗಂಟೆಗಳಲ್ಲಿ ದಾಖಲೆಯ 380 ಎಂಎಂ ಮಳೆ ಸ್ವೀಕರಿಸಿದೆ.
ಜಮ್ಮುವಿನಲ್ಲಿ ಬುಧವಾರ ದಾಖಲೆಯ 380 ಎಂಎಂ ಮಳೆ ಸುರಿದಿದೆ ಎಂದು ಕಾಶ್ಮೀರ ಹವಾಮಾನ ಇಲಾಖೆ ನಿರ್ದೇಶಕ ಡಾ. ಮುಖ್ತರ್ ಅಹ್ಮದ್ ತಿಳಿಸಿದ್ದಾರೆ.
‘‘ಜಮ್ಮುವಿನಲ್ಲಿ 1988ರಲ್ಲಿ 270 ಎಂ ಎಂ ಮಳೆ ಸುರಿದ ದಾಖಲೆಯನ್ನು ಇದು ಮುರಿದಿದೆ. ಇದು ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲಾದ ಅತ್ಯಧಿಕ ಮಳೆ’’ ಎಂದು ಅವರು ಹೇಳಿದ್ದಾರೆ.
ಜಮ್ಮು ಅಲ್ಲದೆ ಕಟರದಲ್ಲಿ 284 ಎಂಎಂ, ರಿಯಾಸಿಯಲ್ಲಿ 282 ಎಂಎಂ, ಸಾಂಬಾದಲ್ಲಿ 170 ಎಂಎಂ, ದಾದದಲ್ಲಿ 130 ಎಂಎಂ, ಕಥುವಾದಲ್ಲಿ 116.5 ಎಂಎಂ, ಬನಿಹಾಲ್‌ನಲ್ಲಿ 83.8 ಎಂಎಂ, ರಾಜೌರಿಯಲ್ಲಿ 57.4 ಎಂಎಂ, ಕಿಸ್ತ್ವಾರದಲ್ಲಿ 49 ಎಂಎಂ ಮಳೆ ಸುರಿದಿದೆ.
ಜಮ್ಮು ಹಾಗೂ ಜಮ್ಮು ವಲಯದ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ನಿರಂತರ ಭಾರೀ ಮಳೆ ಸುರಿದಿದೆ. ಇದರಿಂದ ಜಮ್ಮುವಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಲಾಗುತ್ತಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಚೇನಬ್ ಹಾಗೂ ಇತರ ನೀರಿನಾಗರಗಳಲ್ಲಿ ನೀರು ಇಳಿಕೆಯಾಗಲು ಆರಂಭವಾಗಿದೆ.
‘‘ಜಮ್ಮುವಿನಲ್ಲಿ ಇಷ್ಟೊಂದು ಮಳೆಯಾಗುತ್ತಿರುವುದು ಇದೇ ಮೊದಲು. ನನ್ನ ಜೀವನದಲ್ಲಿ ಇದೇ ಮೊದಲ ಬಾರಿ ಜಮ್ಮು ನಗರದಲ್ಲಿ ಮನೆಗಳು ನೆರೆ ನೀರಿನಲ್ಲಿ ಮುಳುಗಿರುವುದನ್ನು ನೋಡಿದೆ’’ ಎಂದು ಜಮ್ಮುವಿನ ನಿವಾಸಿಯೊಬ್ಬರು ಹೇಳಿದ್ದಾರೆ.