×
Ad

ಜಮ್ಮು | ಅಧಿಕಾರಿಗಳಿಂದ ಮುಸ್ಲಿಂ ಪತ್ರಕರ್ತನ ಮನೆ ನೆಲಸಮ, ಹಿಂದು ವ್ಯಕ್ತಿಯಿಂದ ಜಾಗ ಉಡುಗೊರೆ

Update: 2025-11-28 21:49 IST

Photo Credit : newindianexpress.com

ಜಮ್ಮು,ನ.28: ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಜಮ್ಮು ನಿವಾಸಿ ಕುಲ್ದೀಪ್ ಶರ್ಮಾ ಅವರು ಗುರುವಾರ ಅಧಿಕಾರಿಗಳ ನೆಲಸಮ ಕಾರ್ಯಾಚರಣೆಯಲ್ಲಿ ತನ್ನ ಮನೆಯನ್ನು ಕಳೆದುಕೊಂಡ ಪತ್ರಕರ್ತ ಅರ್ಫಾಜ್ ಅಹ್ಮದ್ ಡೈಂಗ್ ಅವರಿಗೆ ತನ್ನ ಐದು ಮಾರ್ಲಾ (1.25 ಗುಂಟೆ) ಜಮೀನನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜಮ್ಮುಕಾಶ್ಮೀರ ಆಡಳಿತವು ಸರಕಾರಿ ಜಮೀನನ್ನು ಅತಿಕ್ರಮಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮಗೊಳಿಸಿದೆ.

ಆದರೆ, ತಾನು ಮಾಡಿದ್ದ ವರದಿಗೆ ಪ್ರತೀಕಾರವಾಗಿ ತನ್ನ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಡೈಂಗ್ ಪ್ರತಿಪಾದಿಸಿದ್ದಾರೆ.

ನೀಸ್ ಸೆಹೆರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಜಾಲತಾಣವನ್ನು ಹೊಂದಿರುವ ಡೈಂಗ್ ಇತ್ತೀಚಿಗೆ ಗಡಿಯಾಚೆಯ ಬೃಹತ್ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರೊಂದಿಗೆ ಪೋಲಿಸ್ ಅಧಿಕಾರಿಯೋರ್ವರು ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು.

ಮನೆ ನೆಲಸಮದಿಂದಾಗಿ ಡೈಂಗ್ ಅವರ ವೃದ್ಧ ಪೋಷಕರು, ಪತ್ನಿ ಮತ್ತು ಮೂವರು ಮಕ್ಕಳು ನಿರ್ವಸಿತರಾಗಿದ್ದಾರೆ.

ನೆಲಸಮದ ಹೃದಯ ವಿದ್ರಾವಕ ದೃಶ್ಯಗಳು ಮತ್ತು ಡೈಂಗ್ ಅವರ ಕುಟುಂಬವು ತಮಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಅಧಿಕಾರಿಗಳನ್ನು ಅಂಗಲಾಚುತ್ತಿದ್ದನ್ನು ಕಂಡಿದ್ದ ನೆರೆಯ ನಿವಾಸಿ ಶರ್ಮಾ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ.

‘ನಾನು ಅರ್ಫಾಜ್‌ಗೆ ಐದು ಮಾರ್ಲಾ ಜಾಗವನ್ನು ಉಡುಗೊರೆಯಾಗಿ ನೀಡಿದ್ದೇನೆ. ಅದಕ್ಕಾಗಿ ಸೂಕ್ತ ಕಂದಾಯ ದಾಖಲೆಗಳನ್ನು ಮಾಡಿಸಿದ್ದೇನೆ ಮತ್ತು ಅದನ್ನು ಅವರ ಹೆಸರಿನಲ್ಲಿ ನೋಂದಾಯಿಸಿದ್ದೇನೆ. ಅದು ನನ್ನ ಜಾಗ ಮತ್ತು ನನ್ನ ಸೋದರ ಅಸಹಾಯಕನಾಗಿ ಉಳಿಯಬಾರದು ಎಂದು ಅದನ್ನು ನಾನು ಉಡುಗೊರೆಯಾಗಿ ನೀಡಿದ್ದೇನೆ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶರ್ಮಾ ಹೇಳಿದರು.

‘ಭಿಕ್ಷೆ ಬೇಡುವುದಾದರೂ ಸರಿ, ನಾನು ಅವರ ಮನೆಯ ಪುನರ್‌ನಿರ್ಮಾಣಕ್ಕೆ ನೆರವಾಗುತ್ತೇನೆ. ಏನೇ ಆದರೂ ಅವರ ಮನೆಯನ್ನು ಮರುನಿರ್ಮಿಸಲಾಗುವುದು’ಎಂದು ಶರ್ಮಾ ಶಪಥ ತೊಟ್ಟರು.

‘ಅಧಿಕಾರಿಗಳು ಮೂರು ಮಾರ್ಲಾ ಜಾಗದಲ್ಲಿ ಕಟ್ಟಿದ್ದ ಅರ್ಫಾಜ್ ಮನೆಯನ್ನು ನೆಲಸಮಗೊಳಿಸಿದ್ದಾರೆ. ನಾನು ಅವರಿಗೆ ಐದು ಮಾರ್ಲಾ ಜಾಗ ನೀಡಿದ್ದೇನೆ. ಅದನ್ನೂ ಅಧಿಕಾರಿಗಳು ನೆಲಸಮಗೊಳಿಸಿದರೆ ನಾನು ಅವರಿಗೆ 10 ಮಾರ್ಲಾ ಜಾಗವನ್ನು ನೀಡುತ್ತೇನೆ. ದಯವಿಟ್ಟು ಜನರ ಮೇಲೆ ದಬ್ಬಾಳಿಕೆ ನಡೆಸಬೇಡಿ. ಅರ್ಫಾಜ್ ಅವರ ಕುಟುಂಬ ಮತ್ತು ಅವರ ಪುಟ್ಟ ಮಕ್ಕಳು ಈಗ ಬೀದಿಗೆ ಬಿದ್ದಿದ್ದಾರೆ’ ಎಂದು ಮುಸ್ಲಿಂ ಪತ್ರಕರ್ತನ ಕುಟುಂಬದೊಂದಿಗೆ ಗಟ್ಟಿಯಾಗಿ ನಿಂತಿರುವ ಶರ್ಮಾ ಹೇಳಿದರು.

‘ನಮ್ಮ ಕೋಮು ಸೌಹಾರ್ದವು ಎಂದಿಗೂ ಅಂತ್ಯಗೊಳ್ಳುವುದಿಲ್ಲ, ನಾವು ಅವರನ್ನು ಬೆಂಬಲಿಸುತ್ತೇವೆ. ನನ್ನಂತೆಯೇ ಬಹಳಷ್ಟು ಜನರಿದ್ದಾರೆ ’ಎಂದರು.

ತನ್ನ ತಂದೆಯ ನಿರ್ಧಾರದ ಬಗ್ಗೆ ಅಪಾರ ಹೆಮ್ಮೆಯನ್ನು ವ್ಯಕ್ತಪಡಿಸಿದ ಶರ್ಮಾರ ಪುತ್ರಿ ತಾನಿಯಾ,‘ನನ್ನ ತಂದೆ ಇಟ್ಟಿರುವ ಹೆಜ್ಜೆ ಪ್ರಶಂಸನೀಯ. ಈ ನೆಲಸಮ ಕಾರ್ಯಾಚರಣೆಗಳಲ್ಲಿ ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳನ್ನು ಬೆಂಬಲಿಸಲು ಜಮ್ಮುಕಾಶ್ಮೀರದ ಜನರು ಒಗ್ಗೂಡಬೇಕು’ ಎಂದರು.

‘ಜಮ್ಮುವಿನ ಜನರು ನಮ್ಮ ಜೊತೆಯಲ್ಲಿದ್ದಾರೆ,ಹೀಗಾಗಿ ನನಗೀಗ ಯಾವುದೇ ಚಿಂತೆಯಿಲ್ಲ. ನಾವು ಇಲ್ಲಿ ಒಗ್ಗಟ್ಟಿನಿಂದ ಇದ್ದೇವೆ. ನಿನ್ನೆಯಿಂದ ಸಾವಿರಾರು ಜನರು ನಮಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ,ನಮ್ಮೊಂದಿಗಿರಲು ಮತ್ತು ನಮಗೆ ನೆರವಾಗಲು ಮುಂದಾಗಿದ್ದಾರೆ’ಎಂದು ಡೈಂಗ್ ತಂದೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News