370ನೇ ವಿಧಿ ರದ್ದತಿ ಬಳಿಕ ಭಾರೀ ಹೂಡಿಕೆಗೆ ಒತ್ತು ನೀಡಿದ್ದರೂ ಜಮ್ಮುಕಾಶ್ಮೀರದಲ್ಲಿ ದೇಶದಲ್ಲಿಯೇ ಅತ್ಯಂತ ಕನಿಷ್ಠ ಎಫ್‌ಡಿಐ; ವರದಿ
ಸಾಂದರ್ಭಿಕ ಚಿತ್ರ | Photo Credit : PTI
ಶ್ರೀನಗರ: ಜಮ್ಮುಕಾಶ್ಮೀರಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು 2022ರಲ್ಲಿಯೇ ಮಹತ್ವಾಕಾಂಕ್ಷಿ ನೀತಿಗೆ ಚಾಲನೆ ನೀಡಲಾಗಿದ್ದರೂ ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಕೇಂದ್ರಾಡಳಿತ ಪ್ರದೇಶವು ಭಾರತದಲ್ಲಿಯೇ ಅತ್ಯಂತ ಕಡಿಮೆ ವಿದೇಶಿ ನೇರ ಹೂಡಿಕೆಗೆ(ಎಫ್‌ಡಿಐ) ಸಾಕ್ಷಿಯಾಗಿದೆ ಎಂದು deccanherald.com ವರದಿ ಮಾಡಿದೆ.
ಆಗಸ್ಟ್ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮುಕಾಶ್ಮೀರವನ್ನು ಹೊಸ ಆರ್ಥಿಕ ಕೇಂದ್ರವನ್ನಾಗಿ ಮರುಬ್ರ್ಯಾಂಡ್ ಮಾಡಲು ಕೇಂದ್ರದ ಆಕ್ರಮಣಕಾರಿ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳನ್ನು ನೀಡಿಲ್ಲ, ಹೆಚ್ಚಿನ ವಿದೇಶಿ ಹೂಡಿಕೆದಾರರು ಈ ಪ್ರದೇಶದಿಂದ ದೂರವೇ ಉಳಿದಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದ ದತ್ತಾಂಶಗಳ ಪ್ರಕಾರ ಜಮ್ಮುಕಾಶ್ಮೀರವು 2020ರಿಂದ ಕೇವಲ 10.52 ಕೋಟಿ ರೂ.ಗಳ ಎಫ್‌ಡಿಐ ಈಕ್ವಿಟಿಯನ್ನು ಆಕರ್ಷಿಸಿದ್ದು,ಇದು ಇತರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠವಾಗಿದೆ. ತುಲನಾತ್ಮಕವಾಗಿ ಇದೇ ಅವಧಿಯಲ್ಲಿ ಭಾರತಕ್ಕೆ 21.62 ಲಕ್ಷ ಕೋಟಿ ರೂ.ಗಳ ಎಫ್‌ಡಿಐ ಹರಿದುಬಂದಿದ್ದು, ಇದು ಈ ಪ್ರದೇಶದಲ್ಲಿ ವಿದೇಶಿ ಹೂಡಿಕೆದಾರರ ಅನಾಸಕ್ತಿಯನ್ನು ಪ್ರತಿಬಿಂಬಿಸಿದೆ.
ಈ ನಿರಾಶಾದಾಯಕ ಅಂಕಿಅಂಶಗಳು 370ನೇ ವಿಧಿಯ ರದ್ದತಿಯ ಬಳಿಕ ಸರಕಾರವು ಜಮ್ಮುಕಾಶ್ಮೀರವನ್ನು ಪ್ರಮುಖ ಹೂಡಿಕೆ ತಾಣವನ್ನಾಗಿ ಬಿಂಬಿಸಿದ್ದಾಗ ಅದರ ಉತ್ಸಾಹಭರಿತ ನಿರೂಪಣೆಗೆ ತೀವ್ರ ವ್ಯತಿರಿಕ್ತವಾಗಿವೆ. ಸಂಘರ್ಷದಿಂದ ನಲುಗಿದ್ದ ಈ ಪ್ರದೇಶವನ್ನು ಸರಣಿ ನೀತಿ ಸುಧಾರಣೆಗಳು, ಜಾಗತಿಕ ಹೂಡಿಕೆದಾರರ ಶೃಂಗಸಭೆಗಳು ಮತ್ತು ನೂತನ ಭೂ ಬಳಕೆ ನಿಯಮಗಳ ಮೂಲಕ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತೆ ಪರಿವರ್ತಿಸುವುದಾಗಿ ಸರಕಾರವು ಭರವಸೆ ನೀಡಿತ್ತು.
ಜನವರಿ 2022ರಲ್ಲಿ ಜಮ್ಮುಕಾಶ್ಮೀರ ಆಡಳಿತವು 70,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವ ಮತ್ತು ಐದು ಲಕ್ಷ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಕೈಗಾರಿಕಾ ನೀತಿಯೊಂದನ್ನು ಅನಾವರಣಗೊಳಿಸಿತ್ತು.ಆದರೆ ಸುಮಾರು ಮೂರು ವರ್ಷಗಳ ಬಳಿಕವೂ ವಾಸ್ತವಿಕವಾಗಿ ಯಾವುದೇ ಪ್ರಸ್ತಾವವು ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತಾವಿತ ಯೋಜನೆಗಳಲ್ಲಿ ಹಲವು ಇನ್ನೂ ತಿಳುವಳಿಕೆ ಒಡಂಬಡಿಕೆಯ ಹಂತದಲ್ಲಿಯೇ ಇದ್ದು,ಮೂಲಸೌಕರ್ಯ ಅಭಿವೃದ್ಧಿ ಅಥವಾ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ವರದಿಯು ತಿಳಿಸಿದೆ.
ಕಥುವಾ, ಸಾಂಬಾ ಮತ್ತು ಫುಲ್ವಾಮಾಗಳಲ್ಲಿ ಭರವಸೆ ನೀಡಲಾಗಿದ್ದ ಕೈಗಾರಿಕಾ ಎಸ್ಟೇಟ್‌ಗಳು ಹೆಚ್ಚಾಗಿ ಕಾಗದದ ಮೇಲೆಯೇ ಉಳಿದುಕೊಂಡಿದ್ದರೆ,ಖಾಸಗಿ ಸಂಸ್ಥೆಗಳಿಗೆ ಭೂ ಹಂಚಿಕೆಯು ಅಧಿಕಾರಶಾಹಿಯ ವಿಳಂಬ ನೀತಿ ಮತ್ತು ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ವಿರೋಧವನ್ನು ಎದುರಿಸುತ್ತಿದೆ.
ಅಧಿಕಾರಿಗಳು ಮತ್ತು ವಿಶ್ಲೇಷಕರು ನಿರಂತರ ಭದ್ರತಾ ಕಳವಳಗಳು,ಅಧಿಕಾರಶಾಹಿ ಅಡಚಣೆಗಳು,ದುರ್ಬಲ ಸಂಪರ್ಕ ಮತ್ತು ಬೃಹತ್ ಸ್ಥಳೀಯ ಮಾರುಕಟ್ಟೆ ಕೊರತೆ ಸೇರಿದಂತೆ ಹಲವಾರು ಅಂಶಗಳನ್ನು ಹೂಡಿಕೆದಾರರ ಕಳಪೆ ಪ್ರತಿಕ್ರಿಯೆಗೆ ಕಾರಣಗಳನ್ನಾಗಿ ಬೆಟ್ಟು ಮಾಡಿದ್ದಾರೆ.