×
Ad

‘ಮುಸ್ಲಿಮರಿಗೆ ಪ್ರವೇಶ’ ವಿವಾದದ ನಡುವೆ ಜಮ್ಮು ಮೆಡಿಕಲ್ ಕಾಲೇಜಿನ ಅನುಮತಿ ರದ್ದು

Update: 2026-01-07 21:10 IST

Photo Credit : NDTV 

ಜಮ್ಮು,: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿಯು (ಎಂಎಆರ್‌ಬಿ) ಕನಿಷ್ಠ ಮಾನದಂಡಗಳನ್ನು ಪಾಲಿಸದ್ದಕ್ಕಾಗಿ ಜಮ್ಮುಕಾಶ್ಮೀರದ ರಿಯಾಸಿಯಲ್ಲಿನ ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸ್‌ಲೆನ್ಸ್‌ಗೆ ನೀಡಲಾಗಿದ್ದ ಅನುಮತಿ ಪತ್ರವನ್ನು ಹಿಂದೆಗೆದುಕೊಂಡಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಜಮ್ಮುಕಾಶ್ಮೀರದಲ್ಲಿನ ಇತರ ವೈದ್ಯಕೀಯ ಕಾಲೇಜುಗಳಿಗೆ ವರ್ಗಾಯಿಸಲಾಗುವುದು.

ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ ಕಾಲೇಜು ರಾಜಕೀಯ ವಿವಾದದಲ್ಲಿ ಸಿಲುಕಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ 50 ವಿದ್ಯಾರ್ಥಿಗಳ ಆರಂಭಿಕ ಬ್ಯಾಚ್‌ನಲ್ಲಿ 42 ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದರೆ, ಓರ್ವ ಸಿಖ್ ಆಗಿದ್ದಾನೆ. ಇದು ಸಂಘಪರಿವಾರ ಸಂಘಟನೆಗಳಿಂದ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಬಿಜೆಪಿಯು ಎನ್‌ಎಂಸಿ ನಿರ್ಧಾರವನ್ನು ಸ್ವಾಗತಿಸಿದೆ.

ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಅಗತ್ಯ ಮಾನದಂಡಗಳನ್ನು ಪೂರೈಸದ ಕಾರಣ ಎನ್‌ಎಂಸಿ 50 ಎಂಬಿಬಿಎಸ್ ಸೀಟ್‌ಗಳಿಗೆ ಅನುಮತಿಯನ್ನು ಹಿಂದೆಗೆದುಕೊಂಡಿದೆ. ಇದು ಗುಣಮಟ್ಟಕ್ಕೆ ಬದ್ಧತೆಯನ್ನು ಮರುದೃಢಪಡಿಸಿದೆ ಎಂದು ಬಿಜೆಪಿ ಶಾಸಕ ಆರ್.ಎಸ್.ಪಠಾನಿಯಾ ಹೇಳಿದರು.

ಈಗಾಗಲೇ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ತಮ್ಮ ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ. ಅವರಿಗೆ ಜಮ್ಮುಕಾಶ್ಮೀರದ ಇತರ ಮೆಡಿಕಲ್ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಎಂಎಆರ್‌ಬಿ ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಎಂಎಆರ್‌ಬಿ ತಂಡವು ಜ.2ರಂದು ಕಾಲೇಜಿಗೆ ದಿಢೀರ್ ಭೇಟಿ ನೀಡಿ ಮೌಲ್ಯಮಾಪನ ನಡೆಸಿತ್ತು. ಅದು ತನ್ನ ವರದಿಯಲ್ಲಿ ಅಧ್ಯಾಪಕರ ಸಂಖ್ಯೆ,ಕ್ಲಿನಿಕಲ್ ಸಾಮಗ್ರಿ ಮತ್ತು ಮೂಲಸೌಕರ್ಯ ಕೊರತೆಗಳನ್ನು ಎತ್ತಿ ತೋರಿಸಿದೆ.

ಕೆಲವು ಸಮಯದಿಂದ ಪ್ರವೇಶ ಪಟ್ಟಿಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಅದನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದರು. ಸ್ಥಳೀಯ ವ್ಯಾಪಾರಿಗಳ ಸಂಘಗಳೂ ಅವರೊಂದಿಗೆ ಧ್ವನಿಗೂಡಿಸಿದ್ದವು. ಕಾಲೇಜನ್ನು ಶ್ರೀ ಮಾತಾ ವೈಷ್ಣೋದೇವಿ ಮಂದಿರ ಮಂಡಳಿಯು ನಡೆಸುತ್ತಿರುವುದರಿಂದ ಅದು ಹಿಂದು ವಿದ್ಯಾಥಿಗಳಿಗೆ ಆದ್ಯತೆ ನೀಡಬೇಕು ಎನ್ನುವುದು ಅವರ ವಾದವಾಗಿದೆ.

ಪ್ರವೇಶಗಳನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿಯು ಮಂದಿರ ಮಂಡಳಿಯ ಅಧ್ಯಕ್ಷರೂ ಆಗಿರುವ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರಿಗೆ ಅಹವಾಲನ್ನೂ ಸಲ್ಲಿಸಿತ್ತು.

ನೀಟ್ ಪಟ್ಟಿಯ ಪ್ರಕಾರ ಕಾಲೇಜು ಪ್ರವೇಶಗಳ ಕುರಿತು ಎನ್‌ಎಂಸಿಯ ಮಾರ್ಗಸೂಚಿಗಳನ್ನು ಅನುಸರಿಸಿದೆ, ಆದರೂ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ದೊರೆಯಬೇಕು ಎಂದು ಕೆಲವು ಗುಂಪುಗಳು ವಾದಿಸುತ್ತಿವೆ.

ಹೆಚ್ಚುತ್ತಿರುವ ಕ್ಯಾಂಪಸ್ ರಾಜಕೀಯಕರಣದಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಕಾಲೇಜನ್ನು ಮುಚ್ಚುವಂತೆ ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಕೇಂದ್ರವನ್ನು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News