×
Ad

ಜಮ್ಮು | ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ; ಕೇಂದ್ರ ಸರಕಾರದ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ

Update: 2024-07-20 20:41 IST

PC : PTI 

ಜಮ್ಮು : ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಾನ ಸಭೆ ಚುನಾವಣೆಗೆ ಮುನ್ನ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಯೂತ್ ಕಾಂಗ್ರೆಸ್‌ನ ಸದಸ್ಯರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರದೇಶ ಯುವ ಕಾಂಗ್ರೆಸ್‌ನ ಉಸ್ತುವಾರಿ ಮಾನ್ ಸಿಂಗ್ ರಾಥೋಡ್ ನೇತೃತ್ವದ ಪ್ರತಿಭಟನಕಾರರು ನಗರದ ಹೃದಯ ಭಾಗವಾದ ಮಹಾರಾಜ ಹರಿ ಸಿಂಗ್ ಪಾರ್ಕ್‌ನಲ್ಲಿ ಸೇರಿದರು ಹಾಗೂ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಪ್ರತಿಭಟನಾ ರ್ಯಾ ಲಿ ನಡೆಸಲು ಪ್ರಯತ್ನಿಸಿದರು.

ಆದರೆ, ಪೊಲೀಸರು ಅವರ ರ್ಯಾ ಲಿಗೆ ತಡೆ ಒಡ್ಡಿದರು ಹಾಗೂ 12ಕ್ಕೂ ಅಧಿಕ ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡರು. ಅನಂತರ ಪೊಲೀಸ್ ಬಸ್‌ನಲ್ಲಿ ದೂರ ಕರೆದೊಯ್ದರು.

‘‘ಜಮ್ಮು ಹಾಗೂ ಕಾಶ್ಮೀರದ ಜನರಿಗಾಗಿ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಸೆಪ್ಟಂಬರ್ 30ರ ಒಳಗೆ ವಿಧಾನ ಸಭೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಗಡುವು ನೀಡಿದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿ ಗೃಹ ಸಚಿವಾಲಯ ನೀಡಿದ ಆದೇಶವನ್ನು ನೀವು ನೋಡಿರಬಹುದು. ಮುಖ್ಯಮಂತ್ರಿ ಬದಲು ವಾಸ್ತವವವಾಗಿ ಲೆಫ್ಟಿನೆಂಟ್ ಗವರ್ನರ್ ಸರಕಾರದ ನಡೆಸುವ ದಿಲ್ಲಿಯಂತೆ ಜಮ್ಮು ಹಾಗೂ ಕಾಶ್ಮೀರವನ್ನು ಬದಲಾಯಿಸಲು ಅವರು ಬಯುಸಿದ್ದಾರೆ’’ ಎಂದು ರಾಥೋಡ್ ಹೇಳಿದ್ದಾರೆ.

ಬಿಜೆಪಿಯ ನಡೆಗಳು ಅದು ಜಮ್ಮು ಹಾಗೂ ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸುವುದಿಲ್ಲ ಎಂಬುದನ್ನು ತೋರಿಸಿದೆ ಎಂದು ಹೇಳಿದ ಅವರು, ಲೆಪ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವ ವಿರುದ್ಧ ಹಾಗೂ ಜಮ್ಮು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸಲು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದರು.

ಜಮ್ಮು ಹಾಗೂ ಕಾಶ್ಮೀರದಲ್ಲಿ ಸಹಜ ಸ್ಥಿತಿ ನೆಲೆಸಿದೆ ಎಂದು ಬಿಜೆಪಿ ಪ್ರತಿಪಾದಿಸುವುದಕ್ಕಿಂತ ಭಿನ್ನವಾಗಿ ಭಯೋತ್ಪಾದಕ ಘಟನೆಗಳು ಹೆಚ್ಚುತ್ತಿರುವ ಕುರಿತಂತೆ ಕೂಡ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘‘ಭಯೋತ್ಪಾದಕ ದಾಳಿಗಳು ಈ ಸರಕಾರದ ಸಂಪೂರ್ಣ ವಿಫಲತೆಯನ್ನು ಚಿತ್ರಿಸಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಆಗಾಗ ಸಾವು, ನೋವುಗಳು ಸಂಭವಿಸುತ್ತಿರುವ ಬಗ್ಗೆ ಕೇಂದ್ರ ಸರಕಾರ ಉತ್ತರ ನೀಡಬೇಕು ಎಂದು ರಾಥೋಡ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News