ರಾಜಸ್ಥಾನ | ಶಾಲಾ ಕಟ್ಟಡ ಕುಸಿತದ ಬಳಿಕ ತನ್ನ ಮನೆಯನ್ನೇ ಶಾಲೆಗೆ ನೀಡಿದ ರೈತ!
ಎಂಟು ಮಂದಿಯ ಕುಟುಂಬದೊಂದಿಗೆ ಹೊಲದಲ್ಲಿ ಗುಡಿಸಲಿನಲ್ಲಿ ವಾಸ
ಸಾಂದರ್ಭಿಕ ಚಿತ್ರ
ಕೋಟಾ (ರಾಜಸ್ಥಾನ): ರಾಜಸ್ಥಾನದ ಝಲ್ವಾರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದಲ್ಲಿ ನಡೆದ ಶಾಲಾ ಕಟ್ಟಡ ಕುಸಿತದ ದುರಂತದ ಬಳಿಕ, ಗ್ರಾಮದ ಮಕ್ಕಳ ಶಿಕ್ಷಣವನ್ನು ಉಳಿಸಲು ಒಬ್ಬ ಅನಕ್ಷರಸ್ಥ ರೈತ ತೋರಿದ ಉದಾರತೆ ಮಾದರಿಯೆನಿಸಿದೆ. ಮೋರ್ ಸಿಂಗ್ ಎಂಬ ರೈತ, ತಮ್ಮ ಎಂಟು ಮಂದಿಯ ಕುಟುಂಬದೊಂದಿಗೆ ತೀವ್ರ ಸಂಕಷ್ಟದಲ್ಲಿದ್ದರೂ, ಮಕ್ಕಳ ಭವಿಷ್ಯಕ್ಕಾಗಿ ತನ್ನ ದಿನಗೂಲಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಶಾಲೆಗೆ ಬಿಟ್ಟು, ತಾತ್ಕಾಲಿಕವಾಗಿ ಹೊಲದಲ್ಲೇ ವಾಸಿಸಲು ನಿರ್ಧರಿಸಿದ್ದಾರೆ.
ಜುಲೈ ತಿಂಗಳಲ್ಲಿ ನಡೆದ ಈ ದುರಂತದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದು, ಏಳು ವಿದ್ಯಾರ್ಥಿಗಳು ಸಾವನ್ನಪ್ಪಿ, 21 ಮಂದಿ ಮಕ್ಕಳು ಗಾಯಗೊಂಡಿದ್ದರು. ಹೊಸ ತರಗತಿ ಕೋಣೆಗಳ ಅಗತ್ಯವಿದ್ದ ಕಾರಣ, ಶಿಕ್ಷಕರು ಗ್ರಾಮದಾದ್ಯಂತ ಭೂಮಿ ಹಾಗೂ ಕಟ್ಟಡಕ್ಕಾಗಿ ಮನವಿ ಮಾಡಿದರು. ಆದರೆ, ಯಾರೂ ಮುಂದೆ ಬರದ ಸಂದರ್ಭದಲ್ಲಿ, ಮೋರ್ ಸಿಂಗ್ ಅವರು ತಮ್ಮ ಮನೆಯನ್ನು ತೆರವು ಮಾಡಿಕೊಡುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕಿಗೆ ಬೆಂಬಲಕ್ಕೆ ನಿಂತರು.
ಶಿಕ್ಷಕರು “ತರಗತಿಗಳಿಗೆ ನಿಮ್ಮ ಮನೆಯನ್ನು ಕೊಡುತ್ತೀರಾ?” ಎಂದು ಕೇಳಿದಾಗ, ಮೋರ್ ಸಿಂಗ್ ಹಿಂದೆ ಮುಂದೆ ನೋಡದೇ,
“ಯಾಕಾಗಬಾರದು? ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ನನ್ನ ಮನೆಯನ್ನು ತೆರವುಗೊಳಿಸಬಲ್ಲೆ. ದೇವರು ನನ್ನ ಹೃದಯದಲ್ಲಿದ್ದಾನೆ, ಮನೆ ಇಲ್ಲದಿದ್ದರೂ ಪರವಾಗಿಲ್ಲ” ಎಂದು ತಕ್ಷಣವೇ ಒಪ್ಪಿಕೊಂಡಿದ್ದಾರೆ.
ಮೋರ್ ಸಿಂಗ್ ಕುಟುಂಬ ಈಗ ಹೊಲದಲ್ಲಿ ಪ್ಲಾಸ್ಟಿಕ್ ಹಾಳೆ ಮತ್ತು ಟಾರ್ಪಾಲಿನ್ ಬಳಸಿ ನಿರ್ಮಿಸಿದ ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸುತ್ತಿದೆ. ಇದರ ನಿರ್ಮಾಣಕ್ಕಾಗಿ ಅವರು ಶಾಲಾ ಶಿಕ್ಷಕರಿಂದ ಕೇವಲ 500 ರೂಪಾಯಿ ಸಹಾಯವನ್ನಷ್ಟೇ ಕೋರಿದ್ದಾರೆ. ಕುಟುಂಬದಲ್ಲಿ ಪತ್ನಿ ಮಂಗಿ ಬಾಯಿ, 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರ, ಐಟಿಐಯಲ್ಲಿ ಓದುತ್ತಿರುವ ಮತ್ತೊಬ್ಬ ಪುತ್ರ, ಶಾಲೆಯಲ್ಲಿ ಓದುತ್ತಿರುವ ಇಬ್ಬರು ಪುತ್ರಿಯರು ಹಾಗೂ ಒಂದು ಹಸುಗೂಸು ಸೇರಿದೆ. ತೀವ್ರ ಕಷ್ಟಗಳ ನಡುವೆಯೂ, ಕುಟುಂಬದ ಯಾರೂ ಈ ನಿರ್ಧಾರವನ್ನು ವಿರೋಧಿಸಿಲ್ಲ.
ಈ ಘಟನೆ ಬಳಿಕ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. 10 ಹೊಸ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಈಗ 75ಕ್ಕೆ ತಲುಪಿದೆ ಎಂದು ಶಾಲೆಯ ಶಿಕ್ಷಕ ಮಹೇಶ್ ಮೀನಾ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ರಾಜಸ್ಥಾನ ಸರ್ಕಾರ ಪಿಪ್ಲೋಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದು, “ನಮ್ಮ ಸಂಕಲ್ಪ – ಪಿಪ್ಲೋಡಿಯ ಕಾಯಕಲ್ಪ, ದುರಂತದಿಂದ ವಿಕಾಸದವರೆಗೆ” ಎಂಬ ನುಡಿಗಟ್ಟಿನಡಿ ಹೊಸ ಶಾಲಾ ಕಟ್ಟಡದ ನಿರ್ಮಾಣ ಕಾರ್ಯ ವೇಗವಾಗಿ ಮುಂದುವರಿಯುತ್ತಿದೆ.