×
Ad

ಜಾರ್ಖಂಡ್ | ವೆಜ್‌ ಗ್ರಾಹಕನಿಗೆ ನಾನ್‌ ವೆಜ್‌ ಬಿರಿಯಾನಿ ನೀಡಿದ ಆರೋಪ : ರೆಸ್ಟೋರೆಂಟ್ ಮಾಲಕನ ಗುಂಡಿಕ್ಕಿ ಹತ್ಯೆ

Update: 2025-10-19 21:54 IST

ಸಾಂದರ್ಭಿಕ ಚಿತ್ರ

ರಾಂಚಿ, ಅ. 19: ವೆಜ್‌ ಗ್ರಾಹಕನಿಗೆ ನಾನ್‌ ವೆಜ್‌ ಬಿರಿಯಾನಿ ನೀಡಿದ ಆರೋಪದಲ್ಲಿ ರೆಸ್ಟೋರೆಂಟ್ ಮಾಲಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ರಾಂಚಿಯಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಕಾಂಕೆ-ಪಿಠೋರಿಯಾ ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಶನಿವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ.

ಗ್ರಾಹಕನೋರ್ವ ವೆಜ್‌ ಬಿರಿಯಾನಿಗೆ ಆರ್ಡರ್ ಮಾಡಿ ಪಾರ್ಸಲ್ ಪಡೆದುಕೊಂಡು ಹೋಗಿದ್ದ. ಅನಂತರ ಆತ ಇತರರೊಂದಿಗೆ ಹಿಂದಿರುಗಿ ಬಂದು, ತನಗೆ ನಾನ್‌ ವೆಜ್‌ ಬಿರಿಯಾನಿ ನೀಡಲಾಗಿದೆ ಎಂದು ಆರೋಪಿಸಿದ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರವೀಣ್ ಪುಷ್ಕರ್ ಹೇಳಿದ್ದಾರೆ.

ಈ ಸಂದರ್ಭ ಭೋಜನ ಸೇವಿಸುತ್ತಿದ್ದ ರೆಸ್ಟೋರೆಂಟ್ ಮಾಲಕ ಹಾಗೂ ಕಾಂಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಠಾದ ನಿವಾಸಿ ವಿಜಯ್ ಕುಮಾರ್ ನಾಗ್ (47) ಅವರ ಮೇಲೆ ಓರ್ವ ಆಕ್ರಮಣಕಾರ ಗುಂಡು ಹಾರಿಸಿದ. ಅದು ನಾಗ್ ಅವರ ಎದೆಗೆ ಹೊಕ್ಕಿತು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ಅವರು ಹೇಳದ್ದಾರೆ.

ಶಂಕಿತರನ್ನು ಬಂಧಿಸಲು ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಆಕ್ರೋಶಿತರಾದ ಸ್ಥಳೀಯರು ರವಿವಾರ ಬೆಳಗ್ಗೆ ಕಾಂಕೆ-ಪಿಠೋರಿಯಾ ರಸ್ತೆ ತಡೆ ನಡೆಸಿದರು ಹಾಗೂ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆಕ್ರಮಣಕಾರರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಅವರು ರಸ್ತೆ ತಡೆ ತೆರವುಗೊಳಿಸಿದರು’’ ಎಂದು ಕಾಂಕೆ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಕಾಶ್ ರಾಜಕ್ ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬ ಬಗ್ಗೆ ನಿರ್ಧರಿಸಲು ತನಿಖೆ ನಡೆಯುತ್ತಿದೆ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News