×
Ad

ಐ ಲವ್ ಮುಹಮ್ಮದ್ ವಿವಾದ | ಉತ್ತರ ಪ್ರದೇಶ ಸಿಎಂ ಹೇಳಿಕೆ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ ಬಿಜೆಪಿ ನಾಯಕ

Update: 2025-10-03 16:24 IST

Photo | thehindu

ಶ್ರೀನಗರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಹೇಳಿಕೆ ಸ್ವೀಕಾರಾರ್ಹವಲ್ಲ ಹಾಗೂ ಉತ್ತರ ಪ್ರದೇಶ ಪೊಲೀಸರು ಮುಸ್ಲಿಂ ಸಮುದಾಯದ ವಿರುದ್ಧ ಪ್ರತೀಕಾರದ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಜಹಾನ್‌ಝೈಬ್ ಸಿರ್ವಾಲ್, ಪಕ್ಷಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.  

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜಹಾನ್‌ಝೈಬ್ ಸಿರ್ವಾಲ್, "ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯು ಪ್ರಧಾನಿ ನರೇಂದ್ರ ಮೋದಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ದೃಷ್ಟಿಕೋನಕ್ಕೆ ವಿರುದ್ಧವಾಗಿದೆ. ಉತ್ತರ ಪ್ರದೇಶ ಸರಕಾರವು ಆಧಾರರಹಿತ ಕಾನೂನು ಕ್ರಮಗಳು, ತೀವ್ರ ಬಲಪ್ರಯೋಗ ಹಾಗೂ ವಿಭಜನಕಾರಿ ಬೆದರಿಕೆಗಳ ಮೂಲಕ ಈ ಆಶಯಕ್ಕೆ ದ್ರೋಹವೆಸಗುತ್ತಿದೆ" ಎಂದು ಆರೋಪಿಸಿದ್ದಾರೆ.

ʼನಿಷ್ಪಕ್ಷಪಾತ ತನಿಖೆ ಮೂಲಕ ಎಲ್ಲ ತಪ್ಪಿತಸ್ಥರನ್ನೂ ಹೊಣೆಯಾಗಿಸಬೇಕೇ ಹೊರತು, ಯಾವುದೇ ಒಂದು ಸಮುದಾಯವನ್ನಲ್ಲ. ಒಂದು ವೇಳೆ ಬಿಜೆಪಿಯೇನಾದರೂ ಈ ಕುರಿತು ಕ್ರಮ ಕೈಗೊಳ್ಳಲು ಹಾಗೂ ಮುಸ್ಲಿಂ ಸಮುದಾಯದ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವಲ್ಲಿ ವಿಫಲವಾದರೆ ನನಗೆ ರಾಜೀನಾಮೆ ನೀಡದೆ ಬೇರೆ ಆಯ್ಕೆ ಇಲ್ಲʼ ಎಂದು ಜಹಾನ್‌ಝೈಬ್ ಸಿರ್ವಾಲ್ ಎಚ್ಚರಿಸಿದ್ದಾರೆ.

ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಈದ್-ಮಿಲಾದ್ ಮೆರವಣಿಗೆಯ ವೇಳೆ 'ಐ ಲವ್ ಯು ಮುಹಮ್ಮದ್' ಎಂಬ ಭಿತ್ತಿ ಫಲಕಗಳನ್ನು ಅಳವಡಿಸಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು 24 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ನಡೆ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News