ಜಮ್ಮು ಕಾಶ್ಮೀರ | ಶೆಲ್ ದಾಳಿ ಸಂತ್ರಸ್ತ ಕುಟುಂಬಗಳಿಗೆ 'ಚಿಲ್ಲರೆ' ಪರಿಹಾರ; ಸಂತ್ರಸ್ತರ ಆಕ್ರೋಶ
File Photo: PTI
ಶ್ರೀನಗರ: ಗಡಿ ನಿಯಂತ್ರಣ ರೇಖೆಯಗುಂಟ ಗಡಿ ಹೊರಗಿನಿಂದ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಭಾರಿ ಪ್ರಮಾಣದ ನಷ್ಟಕ್ಕೀಡಾಗಿರುವ ಕುಪ್ವಾರ, ಬಾರಾಮುಲ್ಲಾ ಹಾಗೂ ಪೂಂಛ್ ನಿವಾಸಿಗಳು ಸರಕಾರ ತಮಗೆ ನೀಡಿರುವ ಪರಿಹಾರ ಮೊತ್ತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪರಿಹಾರ ಮೊತ್ತವು ನಮ್ಮ ಮನೆಗಳಿಗೆ ಆಗಿರುವ ತೀವ್ರ ಸ್ವರೂಪದ ಹಾನಿಗೆ ಹೋಲಿಸಿದರೆ, ತೀರಾ ಅತ್ಯಲ್ಪ ಮೊತ್ತ ಎಂದು ಅವರು ಹೇಳಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಗಡಿ ನಿಯಂತ್ರಣ ರೇಖೆ ಬಳಿಯ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೊನೊರಾ ಗ್ರಾಮದ ನಿವಾಸಿ ಮುಹಮ್ಮದ್ ಮಕ್ಬೂಲ್ ಖಾನ್, "ನನ್ನ ಮನೆಯು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸಂಪೂರ್ಣವಾಗಿ ಹಾನಿಗೀಡಾಗಿದೆ. ನಾನು ನನ್ನ ಮನೆಯ ಅವಶೇಷಗಳನ್ನು ತೆರವುಗೊಳಿಸಲು 15,000 ರೂ. ವ್ಯಯಿಸಿದೆ. ಅಚ್ಚರಿಯೆಂದರೆ, ಸರಕಾರವು ನನಗೆ ಪರಿಹಾರವೆಂದು ಕೇವಲ 10,000 ರೂ. ಮಾತ್ರ ನೀಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನಗಾಗಿರುವ ಒಟ್ಟು ನಷ್ಟದ ಮೊತ್ತ 25-30 ಲಕ್ಷ ರೂ. ಆಗಿದೆ ಎಂದು ಅಂದಾಜಿಸಿರುವ ಮುಹಮ್ಮದ್ ಮಕ್ಬೂಲ್ ಖಾನ್, ನನಗಾಗಿರುವ ಹಾನಿಯನ್ನು ಮೌಲ್ಯಮಾಪನ ಮಾಡಲು ಹಿರಿಯ ಸಿವಿಲ್ ಎಂಜಿನಿಯರ್‌ಗಳು ಹಾಗೂ ಪೊಲೀಸ್ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದರು. ಹೀಗಿದ್ದೂ, ಪ್ರಾಧಿಕಾರಗಳು ಬಿಡುಗಡೆ ಮಾಡಿರುವ ಪರಿಹಾರ ಮೊತ್ತವನ್ನು ಕಂಡು ನಾನು ಸ್ತಂಭೀಭೂತನಾಗಿದ್ದೇನೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಕುಪ್ವಾರ ಜಿಲ್ಲೆಯ ತಂಗ್ಧಾರ್ ಹಾಗೂ ಕರ್ನಾಹ್ ಗಡಿ ಪ್ರದೇಶಗಳು ಹಾಗೂ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಪಾಕಿಸ್ತಾನ ನಡೆಸಿದ ಸಣ್ಣ ಫಿರಂಗಿ ಹಾಗೂ ಸೇನಾ ಫಿರಂಗಿ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಹಾಗೂ ಕಟ್ಟಡಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ.