×
Ad

ಪಾಕ್ ಶೆಲ್ ದಾಳಿಯಲ್ಲಿ ಮೃತಪಟ್ಟ ಕಾಶ್ಮೀರಿ ಶಿಕ್ಷಕನನ್ನು ʼಭಯೋತ್ಪಾದಕʼನೆಂದು ಸುಳ್ಳು ಸುದ್ದಿ ಪ್ರಸಾರ : ʼಝೀ ನ್ಯೂಸ್ʼ, ʼನ್ಯೂಸ್ 18ʼ ವಿರುದ್ಧ ಎಫ್ಐಆರ್‌ಗೆ ಕೋರ್ಟ್ ಸೂಚನೆ

Update: 2025-06-29 17:26 IST

ಖಾರಿ ಮುಹಮ್ಮದ್ ಇಕ್ಬಾಲ್

ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕುರಿತು ವರದಿಯ ಸಮಯದಲ್ಲಿ ಕಾಶ್ಮೀರಿ ಶಿಕ್ಷಕರೋರ್ವರ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಸುದ್ದಿಯನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜಮ್ಮುಕಾಶ್ಮೀರದ ಪೂಂಚ್ ನ್ಯಾಯಾಲಯ ಸುದ್ದಿ ವಾಹಿನಿಗಳಾದ ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದೆ.

"ಮೇ 7ರಂದು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಮೃತಪಟ್ಟ ಸ್ಥಳೀಯ ಶಿಕ್ಷಕ ಖಾರಿ ಮುಹಮ್ಮದ್ ಇಕ್ಬಾಲ್ ಅವರನ್ನು ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ಚಾನೆಲ್ ಲಷ್ಕರೆ-ತೋಯ್ಬಾ ಜೊತೆ ಸಂಬಂಧ ಹೊಂದಿರುವ ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ʼಪಾಕಿಸ್ತಾನಿ ಭಯೋತ್ಪಾದಕʼ ಎಂದು ತಪ್ಪಾಗಿ ಹೇಳಿಕೊಂಡಿವೆʼ" ಎಂದು ವಕೀಲರಾದ ಶೇಖ್ ಮುಹಮ್ಮದ್ ಸಲೀಮ್ ದೂರು ಸಲ್ಲಿಸಿದ್ದರು.

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಫೀಕ್ ಅಹ್ಮದ್, ಝೀ ನ್ಯೂಸ್ ಮತ್ತು ನ್ಯೂಸ್ 18 ಚಾನಲ್ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಸೂಚಿಸಿದ್ದಾರೆ.

ಮೃತ ಖಾರಿ ಇಕ್ಬಾಲ್ ಪೂಂಚ್‌ನ ಜಾಮಿಯಾ ಝಿಯಾ-ಉಲ್-ಉಲೂಮ್‌ನಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದರು. ಅವರು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದರು. ಆಪರೇಷನ್ ಸಿಂಧೂರ್ ನೇರ ವರದಿಯ ಸಮಯದಲ್ಲಿ ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ "ಕುಖ್ಯಾತ ಕಮಾಂಡರ್" ಎಂದು ಹೇಳಿದೆ. ಇದಲ್ಲದೆ ಯಾವುದೇ ಪರಿಶೀಲನೆ ನಡೆಸದೆ ಭಯೋತ್ಪಾದಕರ ಜೊತೆ ಸಂಬಂಧ ಕಲ್ಪಿಸಿ ವರದಿ ಮಾಡಿದೆ. ವರದಿಯ ವೇಳೆ ಅವರ ಫೋಟೊ ಮತ್ತು ಪೂರ್ಣ ಹೆಸರನ್ನು ಕೂಡ ಬಳಸಲಾಗಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News