ಪತ್ರಕರ್ತ ಮಜೀದ್ ಹೈದರಿ ಬಂಧನವನ್ನು ರದ್ದುಗೊಳಿಸಿದ ಜಮ್ಮು,ಕಾಶ್ಮೀರ ಹೈಕೋರ್ಟ್
ಮಜೀದ್ ಹೈದರಿ (Photo credit: scroll.in)
ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ 17 ತಿಂಗಳಿನಿಂದ ಬಂಧನದಲ್ಲಿದ್ದ ಸ್ವತಂತ್ರ ಪತ್ರಕರ್ತ ಮಜೀದ್ ಹೈದರಿ ಅವರ ಬಂಧನವನ್ನು ರದ್ದುಗೊಳಿಸಿದೆ.
ಮಜೀದ್ ಹೈದರಿ ಪತ್ರಿಕೋದ್ಯಮದ ಸೋಗಿನಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸಿದ್ದಾರೆ ಎಂದು ಪೊಲೀಸರು ಮತ್ತು ಶ್ರೀನಗರ ಜಿಲ್ಲಾಡಳಿತ ಆರೋಪಿಸಿದೆ.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಅವರ ಪೀಠ, ಹೈದರಿಯ ಬಂಧನದ ಕುರಿತು ನೀಡಿರುವ ಮಾಹಿತಿಗಳು ಅಸ್ಪಷ್ಟವಾಗಿದ್ದು, ಆರೋಪಿತ ಚಟುವಟಿಕೆಯ ದಿನಾಂಕ, ತಿಂಗಳು ಮತ್ತು ವರ್ಷವನ್ನು ಉಲ್ಲೇಖಿಸಿಲ್ಲ. ಇಂತಹ ಅಸ್ಪಷ್ಟ ಆಧಾರದಲ್ಲಿನ ಬಂಧನವನ್ನು ಸಮರ್ಥಿಸಲಾಗುವುದಿಲ್ಲ ಎಂದು ಹೇಳಿದೆ.
2023ರ ಸೆಪ್ಟೆಂಬರ್ 14ರಂದು ಶ್ರೀನಗರದಲ್ಲಿ ಹೈದರಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಅವರನ್ನು ಕೋಟ್ ಭಲ್ವಾಲ್ ಜೈಲಿನಲ್ಲಿರಿಸಲಾಗಿದೆ. ನ್ಯಾಯಾಲಯವು ವಿಚಾರಣೆಯ ವೇಳೆ 2024ರ ತೀರ್ಪನ್ನು ಉಲ್ಲೇಖಿಸಿದ್ದು, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ನೀತಿಗಳ ಬಗೆಗಿನ ಟೀಕೆ ಓರ್ವ ವ್ಯಕ್ತಿಯನ್ನು ಬಂಧನದಲ್ಲಿರಿಸಲು ಆಧಾರವೆಂದು ಹೇಳಲಾಗುವುದಿಲ್ಲ ಎಂದು ಹೇಳಿದೆ.
ವಿಚಾರಣೆಯಿಲ್ಲದೆ ಎರಡು ವರ್ಷಗಳವರೆಗೆ ಬಂಧನದಲ್ಲಿರಿಸಲು ಅನುಮತಿ ನೀಡುವ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವ ಮೊದಲು ಮಜೀದ್ ಹೈದರಿ ವಿರುದ್ಧ ಸ್ಥಳೀಯ ಪತ್ರಕರ್ತರ ದೂರಿನ ಆಧಾರದಲ್ಲಿ ಕ್ರಿಮಿನಲ್ ಪಿತೂರಿ, ಸುಲಿಗೆ, ಸುಳ್ಳು ಮಾಹಿತಿ ಪ್ರಸಾರ, ಮಾನನಷ್ಟದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.