×
Ad

ಪಹಲ್ಗಾಮ್ ದಾಳಿಯಲ್ಲಿ ಪ್ರವಾಸಿಗರನ್ನು ರಕ್ಷಿಸಿ ಹುತಾತ್ಮರಾದ ಆದಿಲ್‌ ಹುಸೇನ್‌ ಪತ್ನಿಗೆ ಸರಕಾರಿ ಉದ್ಯೋಗ

Update: 2025-06-14 18:59 IST

ಹೊಸದಿಲ್ಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ವೇಳೆ ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಭಯೋತ್ಪಾದಕರ ಗುಂಡೇಟಿಗೆ ಹುತಾತ್ಮರಾಗಿದ್ದ ಸೈಯದ್ ಆದಿಲ್ ಹುಸೇನ್ ಷಾ ಅವರ ಪತ್ನಿ ಗುಲ್ನಾಜ್ ಅಖ್ತರ್ ಅವರಿಗೆ ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸರಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ.

ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ನ ಹಪತ್ನಾರ್ ಪ್ರದೇಶದಲ್ಲಿರುವ ಆದಿಲ್ ಶಾ ಅವರ ನಿವಾಸಕ್ಕೆ ಭೇಟಿ ನೀಡಿದ  ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದಿಲ್ ಶಾ ಅವರ ಪತ್ನಿ ಗುಲ್ನಾಜ್ ಅಖ್ತರ್ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಆದಿಲ್ ಶಾ ಅವರ ಕುಟುಂಬದ ಸದಸ್ಯರು ಮತ್ತು ಕೆಲವು ಸ್ಥಳೀಯರ ಜೊತೆಗೆ ಮನೋಜ್ ಸಿನ್ಹಾ ಈ ವೇಳೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಮನೋಜ್ ಸಿನ್ಹಾ, ಗುಲ್ನಾಜ್ ಅಖ್ತರ್ ಅವರಿಗೆ ಅನಂತ್‌ನಾಗ್‌ನ ಮೀನುಗಾರಿಕೆ ಇಲಾಖೆಯಲ್ಲಿ ಶಾಶ್ವತ ಉದ್ಯೋಗ ನೀಡಲಾಗಿದೆ. ಇದು ಪತಿಯ ಶೌರ್ಯಕ್ಕೆ ಸರಕಾರ ನೀಡುವ ಕೃತಜ್ಞತೆಯ ಸಂಕೇತವಾಗಿದೆ. ಆದಿಲ್ ಶಾ ಅವರ ಕುಟುಂಬಕ್ಕೆ ಈಗಾಗಲೇ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮನೋಜ್ ಸಿನ್ಹಾ, ಹುತಾತ್ಮ ಸೈಯದ್ ಆದಿಲ್ ಹುಸೇನ್ ಅವರ ಕುಟುಂಬದ ಸದಸ್ಯರನ್ನು ಅನಂತ್ನಾಗ್‌ನಲ್ಲಿ ಭೇಟಿಯಾದೆ. ಅವರ ಪತ್ನಿ ಗುಲ್ನಾಜ್ ಅಖ್ತರ್ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದೆ. ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ರಕ್ಷಿಸುವಾಗ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಲ್ ಅವರ ಧೈರ್ಯದ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News