ಕ್ಷುಲ್ಲಕ ಕಾರಣಕ್ಕೆ ವಾಗ್ವಾದ; ಹಾಲಿವುಡ್ ನಟ ಜೊನಾಥನ್ ಜಾಸ್ ಗೆ ಗುಂಡಿಕ್ಕಿ ಹತ್ಯೆ ಮಾಡಿದ ನೆರೆಮನೆಯಾತ!
PC : indiatoday.in
ಟೆಕ್ಸಾಸ್ (ಅಮೆರಿಕ): ನೆರೆಯವನೊಂದಿಗೆ ವಾಗ್ವಾದಕ್ಕಿಳಿದ ಜನಪ್ರಿಯ ಹಾಲಿವುಡ್ ನಟ ಜೊನಾಥನ್ ಜಾಸ್ (59), ಆತನ ಗುಂಡೇಟಿಗೆ ಬಲಿಯಾಗಿರುವ ಘಟನೆ ರವಿವಾರ ಟೆಕ್ಸಾಸ್ ಸ್ಯಾನ್ ಆಂಟೋನಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕ್ಷುಲ್ಲಕ ವಿಚಾರವೊಂದಕ್ಕೆ ನಟ ಜೊನಾಥನ್ ಜಾಸ್, ತಮ್ಮ ನೆರೆ ಮನೆಯ ಸಿಗ್ಫ್ರೆಡೊ ಅಲ್ವಾರೆಜ್-ಸೆಗಾ (37) ಎಂಬ ವ್ಯಕ್ತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ, ತನ್ನ ಬಳಿಯಿದ್ದ ಬಂದೂಕನ್ನು ಹೊರತೆಗೆದಿರುವ ಆತ, ಜೊನಾಥನ್ ಜಾಸ್ ಮೇಲೆ ಗುಂಡು ಹಾರಿಸಿದ್ದಾನೆ. ಅವರ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿರುವ ಆತ, ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೊನಾಥನ್ ಜಾಸ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬೆನ್ನಿಗೇ, ಆರೋಪಿ ಸಿಗ್ಫ್ರೆಡೊ ಅಲ್ವಾರೆಜ್-ಸೆಗಾ ಪರಾರಿಯಾಗಿದ್ದ ಕಾರಿನ ವಿವರಗಳನ್ನು ಸಂಗ್ರಹಿಸಿದ ಪೊಲೀಸರು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
'ಕಿಂಗ್ ಆಫ್ ದಿ ಹಿಲ್' ಹಾಗೂ 'ಪಾರ್ಕ್ಸ್ ಆ್ಯಂಡ್ ರಿಕ್ರಿಯೇಷನ್' ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಜೊನಾಥನ್ ಜಾಸ್ ಹಾಲಿವುಡ್ ನ ಜನಪ್ರಿಯ ನಟರ ಪೈಕಿ ಒಬ್ಬರಾಗಿದ್ದರು.