×
Ad

ಪತ್ರಕರ್ತೆ ರಾಣಾ ಅಯ್ಯೂಬ್‌ ಅವರಿಗೆ ಜೀವಬೆದರಿಕೆ ಕರೆ : ಭದ್ರತೆ ನೀಡುವಂತೆ ಸರಕಾರಕ್ಕೆ ಸಿಪಿಜೆ ಆಗ್ರಹ

Update: 2025-11-04 23:21 IST

ಹೊಸದಿಲ್ಲಿ,ನ.4: ಅಜ್ಞಾತ ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದರಿಂದ ತಮಗೆ ಜೀವಬೆದರಿಕೆ ಕರೆಗಳು ಬಂದಿರುವುದಾಗಿ ಭಾರತೀಯ ಪತ್ರಕರ್ತೆ ಹಾಗೂ ವಾಶಿಂಗ್ಟನ್ ಪೋಸ್ಟ್‌ನ ಅಂಕಣಗಾರ್ತಿ ರಾಣಾ ಅಯ್ಯೂಬ್ ಹಾಗೂ ಅವರ ಕುಟುಂಬಿಕರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದೆ.

ದೂರವಾಣಿ ಕರೆ ಮಾಡಿದ ವ್ಯಕ್ತಿಯು, ರಾಣಾ ಅಯ್ಯೂಬ್ ಅವರ ಮನೆ ವಿಳಾಸವನ್ನು ಉಲ್ಲೇಖಿಸಿದ್ದಾನೆ ಹಾಗೂ ಆಕೆಗೆ ಮತ್ತು ಆಕೆಯ ತಂದೆಗೆ ಜೀವಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಿದೆ.

ಈ ಬಗ್ಗೆ ಸಿಪಿಜೆಯ ಭಾರತೀಯ ಪ್ರತಿನಿಧಿ ಕುನಾಲ್ ಮಜುಂದಾರ್ ಅವರು ಹೇಳಿಕೆಯೊಂದನ್ನು ನೀಡಿ, ‘‘ಅಂತಾರಾಷ್ಟ್ರೀಯ ಅಜ್ಞಾತ ದೂರವಾಣಿ ಸಂಖ್ಯೆಯಿಂದ ರಾಣಾ ಅಯ್ಯೂಬ್ ಹಾಗೂ ಅವರ ತಂದೆಗೆ ಜೀವಬೆದರಿಕೆಯೊಡ್ಡಿರುವುದು ಅತ್ಯಂತ ಕಳವಳಕಾರಿಯಾಗಿದೆ.

ಆ ವ್ಯಕ್ತಿಯನ್ನು ಪತ್ತೆಹಚ್ಚಲು ಅಧಿಕಾರಿಗಳು ಕ್ಷಿಪ್ರವಾಗಿ ಕಾರ್ಯಾಚರಿಸಬೇಕು ಹಾಗೂ ಭಾರತದಲ್ಲಿ ಎಲ್ಲಾ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಬೇಕು ’’ಎಂದು ಸಿಪಿಜೆಯ ಭಾರತ ಪ್ರತಿನಿಧಿ ಕುನಾಲ್ ಮಜುಂದಾರ್ ತಿಳಿಸಿದ್ದಾರೆ.

ನವೆಂಬರ್ 2ರಂದು ತನ್ನ ಮೊಬೈಲ್‌ಫೋನ್‌ಗೆ ಅಜ್ಞಾತ ವ್ಯಕ್ತಿಯೊಬ್ಬ ವಾಟ್ಸ್‌ಅಪ್ ಕರೆ ಹಾಗೂ ಮೆಸೇಜ್‌ಗಳನ್ನು ಮಾಡಿದ್ದನು. ತಾನು 1984ರ ಸಿಖ್ಖ್ ವಿರೋಧಿ ಗಲಭೆಗಳ ಬಗ್ಗೆ ಅಂಕಣವೊಂದನ್ನು ಬರೆಯಬೇಕೆಂದು ಆತ ಆಗ್ರಹಿಸಿದ್ದನು. ಇಲ್ಲದೆ ಹೋದಲ್ಲಿ ತನಗೆ ಹಾಗೂ ತನ್ನ ತಂದೆಯ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದನೆಂದು ರಾಣಾ ಅಯ್ಯೂಬ್ ನವೆಂಬರ್ 3ರಂದು ನವಿಮುಂಬೈನ ಕೋಪಾರ್ ಖೈರಾನೆ ಪೊಲೀಸ್ ಠಾಣೆಗೆ ನೀಡಿದ ದೂರಿಲ್ಲಿ ತಿಳಿಸಿದ್ದಾರೆ.

ಬೆದರಿಕೆ ಕರೆ ಮಾಡಿದ ವ್ಯಕ್ತಿಯ ವಾಟ್ಯಾಪ್ ಪ್ರೊಫೈಲ್‌ನಲ್ಲಿ ಪ್ರಸಕ್ತ ಗುಜರಾತ್‌ನಲ್ಲಿ ಬಂಧನದಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಭಾವಚಿತ್ರವಿದ್ದುದಾಗಿ ಅಯ್ಯೂಬ್ ತಿಳಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿಗೆ ತನ್ನ ನಿವಾಸದ ವಿಳಾಸ ತಿಳಿದಿರುವುದಾಗಿಯೂ ಅಯ್ಯೂಬ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೀವಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಅಯ್ಯೂಬ್ ಅವರ ನಿವಾಸದಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News