2025ರಲ್ಲಿ ಜಗತ್ತಿನಾದ್ಯಂತ 128 ಪತ್ರಕರ್ತರ ಹತ್ಯೆ; ಶೇ. 44ರಷ್ಟು ಗಾಝಾದ ಪತ್ರಕರ್ತರು ಬಲಿ!
ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ವರದಿ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಜ. 1: 2025ರಲ್ಲಿ ಜಾಗತಿಕವಾಗಿ 128 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟವು ಬುಧವಾರ ತಿಳಿಸಿದೆ.
ಅರ್ಧಾಂಶಕ್ಕಿಂತಲೂ ಅಧಿಕ ಅಂದರೆ 74 ಪತ್ರಕರ್ತರ ಹತ್ಯೆಗಳು ಪಶ್ಚಿಮ ಏಶ್ಯಾದಲ್ಲಿ ನಡೆದಿವೆ ಎಂದು ಬೆಲ್ಜಿಯಂ ಮೂಲದ ಒಕ್ಕೂಟವು ತಿಳಿಸಿದೆ. ಈ ಪೈಕಿ ಶೇ. 44ರಷ್ಟು ಮಂದಿ (56) ಗಾಝಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆದ ಸಂಘರ್ಷದಲ್ಲಿ ಮಡಿದಿದ್ದಾರೆ.
ಆಫ್ರಿಕಾದಲ್ಲಿ 18 ಪತ್ರಕರ್ತರು, ಏಶ್ಯಾ–ಪೆಸಿಫಿಕ್‌ನಲ್ಲಿ 15 ಹಾಗೂ ಅಮೆರಿಕದಲ್ಲಿ 11 ಮಂದಿ ಮತ್ತು ಯುರೋಪ್‌ನಲ್ಲಿ 10 ಮಂದಿ ಪತ್ರಕರ್ತರು ಕೊಲೆಯಾಗಿದ್ದಾರೆ. ಆಕಸ್ಮಿಕವಾಗಿ ಮೃತಪಟ್ಟ 9 ಮಂದಿಯೂ ಪಟ್ಟಿಯಲ್ಲಿ ಸೇರಿದ್ದಾರೆ.
ಭಾರತದಲ್ಲಿ ನಾಲ್ವರು ಪತ್ರಕರ್ತರು ಹತ್ಯೆಯಾಗಿರುವುದನ್ನು ಪತ್ರಕರ್ತರ ಒಕ್ಕೂಟವು ದಾಖಲಿಸಿಕೊಂಡಿದೆ. ಯೂಟ್ಯೂಬ್ ಚಾನೆಲ್ ‘ಬಸ್ತಾರ್ ಜಂಕ್ಷನ್’ ನಡೆಸುತ್ತಿದ್ದ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ಕೊಲೆ ಪ್ರಕರಣದ ಬಗ್ಗೆಯೂ ಒಕ್ಕೂಟವು ಗಮನಸೆಳೆದಿದೆ.
ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಯೋಜನೆಯಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ ಚಂದ್ರಾಕರ್ ಅವರನ್ನು ಹತ್ಯೆ ಮಾಡಲಾಗಿದೆ. ರಸ್ತೆ ಗುತ್ತಿಗೆದಾರರೊಬ್ಬರ ನಿವೇಶನದಲ್ಲಿರುವ ಶೌಚಗುಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಕಳೆದ ವರ್ಷ ಜಗತ್ತಿನಾದ್ಯಂತ 533 ಮಂದಿ ಪತ್ರಕರ್ತರನ್ನು ಜೈಲು ಪಾಲು ಮಾಡಲಾಗಿದೆ. ಬಂಧನಕ್ಕೊಳಗಾದವರಲ್ಲಿ ಏಶ್ಯಾ–ಪೆಸಿಫಿಕ್ ಪ್ರಾಂತದ ಪತ್ರಕರ್ತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ 143 ಮಂದಿ ಹಾಗೂ ಮ್ಯಾನ್ಮಾರ್‌ನಲ್ಲಿ 49 ಮಂದಿ ಪತ್ರಕರ್ತರು ಬಂಧಿತರಾಗಿದ್ದಾರೆ.
2024ರಲ್ಲಿ 122 ಮಂದಿ ಪತ್ರಕರ್ತರು ಸಾವನ್ನಪ್ಪಿದ್ದರು ಹಾಗೂ 516 ಮಂದಿ ಬಂಧನಕ್ಕೊಳಗಾಗಿದ್ದರು.