ಮರಳು ಮಾಫಿಯಾ ಬಗ್ಗೆ ವರದಿ ಮಾಡಿದ್ದಕ್ಕೆ ಪೊಲೀಸರಿಂದ ಕಿರುಕುಳ ಆರೋಪಿಸಿದ ಪತ್ರಕರ್ತರು: ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
Photo credit: PTI
ಭೋಪಾಲ್ : ಮರಳು ಮಾಫಿಯಾ ವರದಿಗಳಿಗೆ ಸಂಬಂಧಿಸಿದಂತೆ ದುರ್ನಡತೆಯ ಆರೋಪ ಹೊತ್ತಿರುವ ಮಧ್ಯಪ್ರದೇಶದ ಪತ್ರಕರ್ತರಾದ ಶಶಿಕಾಂತ್ ಗೋಯಲ್ ಮತ್ತು ಅಮರಕಾಂತ್ ಸಿಂಗ್ ಚೌಹಾಣ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮರಳು ಮಾಫಿಯಾ ಬಗ್ಗೆ ವರದಿ ಮಾಡಿದ್ದಕ್ಕೆ ಪೊಲೀಸರು 'ಕಿರುಕುಳ' ನೀಡುತ್ತಿದ್ದಾರೆ ಎಂದು ಪತ್ರಕರ್ತರಾದ ಶಶಿಕಾಂತ್ ಮತ್ತು ಅಮರಕಾಂತ್ ಸಿಂಗ್ ಚೌಹಾಣ್ ಕೋರ್ಟ್ ಗಮನಕ್ಕೆ ತಂದಿದ್ದರು. ಆದರೆ, ಅರ್ಜಿದಾರರ ಪರವಾಗಿ ಯಾವುದೇ ಮಧ್ಯಂತರ ಆದೇಶವನ್ನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಎಸ್‌ಪಿ ಅಸಿತ್ ಯಾದವ್ ಸೇರಿದಂತೆ ಭಿಂಡ್ ಪೊಲೀಸರು ಕಸ್ಟಡಿ ಹಿಂಸಾಚಾರ, ಜಾತಿ ಆಧಾರಿತ ನಿಂದನೆ ಮತ್ತು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ, ಪತ್ರಕರ್ತರಾದ ಶಶಿಕಾಂತ್ ಮತ್ತು ಅಮರಕಾಂತ್ ಸಿಂಗ್ ಚೌಹಾಣ್ ಮೇಲೆ ಹೊರಿಸಲಾದ ಅಪರಾಧದ ನಿಖರ ಸ್ವರೂಪದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸದ ಹೊರತು ಇಬ್ಬರಿಗೆ ಬಂಧನದಿಂದ ರಕ್ಷಣೆ ನೀಡುವ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.