Uttar Pradesh | ಸಂಭಲ್ ಗುಂಡಿನ ದಾಳಿ ಪ್ರಕರಣ: ಪೊಲೀಸರ ವಿರುದ್ಧ ಎಫ್‌ಐಆರ್ ಗೆ ಆದೇಶಿಸಿದ್ದ ಜಡ್ಜ್ ವರ್ಗಾವಣೆ
ಸಾಂದರ್ಭಿಕ ಚಿತ್ರ (AI)
ಲಕ್ನೋ: ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಆದೇಶ ನೀಡಿದ್ದ ಸಂಭಲ್ ನ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ವಿಭಾಂಶು ಸುಧೀರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಸುಲ್ತಾನ್‌ಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿದೆ.
ಸಿಜೆಎಂ ಸುಧೀರ್ ಸೇರಿದಂತೆ ಒಟ್ಟು 14 ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
ನವೆಂಬರ್ 2024ರಲ್ಲಿ ನಡೆದ ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ಕೆಲವೇ ದಿನಗಳ ಬಳಿಕ ಈ ವರ್ಗಾವಣೆ ನಡೆದಿದೆ. ಆದೇಶದಲ್ಲಿ ಆಗಿನ ಸಂಭಲ್ ವೃತ್ತಾಧಿಕಾರಿ ಅನುಜ್ ಚೌಧರಿ, ಸಂಭಲ್ ಕೊತ್ವಾಲಿ ಠಾಣೆಯ ಉಸ್ತುವಾರಿ ಅನುಜ್ ಕುಮಾರ್ ತೋಮರ್ ಹಾಗೂ 15ರಿಂದ 20 ಮಂದಿ ಗುರುತಿಸಲಾಗದ ಪೊಲೀಸ್ ಸಿಬ್ಬಂದಿಯ ಹೆಸರುಗಳು ಸೇರಿವೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯ ಪ್ರಕಾರ, 2024ರ ನವೆಂಬರ್ 24ರಂದು ಬೆಳಿಗ್ಗೆ ಸುಮಾರು 8.45ರ ವೇಳೆಗೆ, ಸಂಭಲ್‌ನ ಮೊಹಲ್ಲಾ ಕೋಟ್ ಪ್ರದೇಶದಲ್ಲಿರುವ ಜಾಮಾ ಮಸೀದಿ ಸಮೀಪ, ಆಲಂ ತಳ್ಳುವ ಗಾಡಿಯಲ್ಲಿ ರಸ್ಕ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡುತ್ತಿದ್ದಾಗ, ಪೊಲೀಸ್ ಸಿಬ್ಬಂದಿ ಜನಸಮೂಹದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವು ಕೊಲೆ ಯತ್ನದ ಆರೋಪಕ್ಕೆ ಸಂಬಂಧಿಸಿದೆ. ಸ್ಥಳೀಯ ಯುವಕ ಆಲಂ ಅವರಿಗೆ ಗುಂಡೇಟಿನಿಂದ ಗಂಭೀರ ಗಾಯಗಳಾಗಿವೆ ಎಂದು ಆರೋಪಿಸಲಾಗಿತ್ತು.
ಪೊಲೀಸ್ ವರದಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸಂತ್ರಸ್ತನಿಗೆ ನಿಜವಾಗಿಯೂ ಗುಂಡೇಟಿನ ಗಾಯಗಳಾಗಿವೆ ಎಂಬುದನ್ನು ಗಮನಿಸಿದೆ. ಆದರೆ ಗುಂಡು ಹಾರಿಸಿದ ವ್ಯಕ್ತಿಯ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಘಟನೆಯ ನಿಜವಾದ ಸಂಗತಿಗಳು ಸಂಪೂರ್ಣ ತನಿಖೆಯಿಂದಲೇ ಬಹಿರಂಗವಾಗಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಕೊಲೆ ಯತ್ನದಂತಹ ಗಂಭೀರ ಅಪರಾಧ ಪ್ರಕರಣದಲ್ಲಿ, ಸಂತ್ರಸ್ತನು ನಿಜವಾದ ಅಪರಾಧಿಯನ್ನು ತಪ್ಪಿಸಿ ಬೇರೆ ವ್ಯಕ್ತಿಯ ಮೇಲೆ ತಪ್ಪಾಗಿ ಆರೋಪ ಮಾಡುವ ಸಾಧ್ಯತೆ ಕಡಿಮೆ ಎಂಬುದನ್ನು ಸಿಜೆಎಂ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.
ಗುಂಡು ಹಾರಿಸುವುದು ಅಧಿಕೃತ ಕರ್ತವ್ಯದ ಭಾಗ ಎಂಬ ಪೊಲೀಸರ ಪ್ರಾಥಮಿಕ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ಸಿಜೆಎಂ, ವ್ಯಕ್ತಿಯ ಮೇಲೆ ಗುಂಡು ಹಾರಿಸುವುದನ್ನು ಅಧಿಕೃತ ಕರ್ತವ್ಯ ನಿರ್ವಹಣೆ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಅಂತಹ ಕ್ರಮಕ್ಕೆ ಶಾಸನಬದ್ಧ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪೊಲೀಸ್ ವರದಿಯು ಅನುಮಾನಾಸ್ಪದವಾಗಿದ್ದು, ಅದು ವೈದ್ಯಕೀಯ ಸಾಕ್ಷ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ವರದಿಯಲ್ಲಿ ‘ಗುಂಡೇಟಿನ ಗಾಯ’ ಹಾಗೂ ‘ಗಲಭೆಯ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ’ ಎಂಬ ಉಲ್ಲೇಖಗಳಿರುವುದನ್ನೂ ನ್ಯಾಯಾಲಯ ಸೂಚಿಸಿದೆ. ಪ್ರಾಥಮಿಕವಾಗಿ ಗುರುತಿಸಬಹುದಾದ ಅಪರಾಧ ನಡೆದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಸಂಪೂರ್ಣ ತನಿಖೆಯಿಂದ ಮಾತ್ರ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದೆ.
ಗಾಯಗೊಂಡ ಯುವಕನ ತಂದೆ ಯಾಮೀನ್ ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 173(4)ರ ಅಡಿಯಲ್ಲಿ ಅಂಗೀಕರಿಸಿರುವ ಸಿಜೆಎಂ ವಿಭಾಂಶು ಸುಧೀರ್, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದರು.