ರಾಜಸ್ಥಾನ| ಭೀಕರ ರಸ್ತೆ ಅಪಘಾತ; ನಾಲ್ವರು ಯುವಕರು ಮೃತ್ಯು
ಉದಯಪುರ : ಅತಿ ವೇಗದಲ್ಲಿ ಕಾರನ್ನು ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿ ಸಂಭವಿಸಿದ ದುರಂತದಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಯುವಕರು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕಾರು 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ನಡುವೆ ಕಾರಿನಲ್ಲಿದ್ದ ಇಬ್ಬರು ಸಿಗರೇಟ್ ಸೇದಿಕೊಂಡು ಸಂಗೀತ ಕೇಳುತ್ತಾ, ಪರದೆಯ ಮೇಲೆ ವಿಡಿಯೊ ವೀಕ್ಷಿಸುತ್ತಿರುವ ವಿಡಿಯೊ ಲಭ್ಯವಾಗಿದೆ. ಅಪಘಾತಕ್ಕೆ ಮುನ್ನ ಕಾರಿನ ವೇಗವನ್ನು ತಗ್ಗಿಸುವಂತೆ ಸ್ನೇಹಿತರಿಗೆ ಕೇಳಿಕೊಳ್ಳುತ್ತಿರುವ ಶಬ್ದವೂ ದಾಖಲಾಗಿದೆ.
ಕಾರು ಅಪಘಾತಕ್ಕೀಡಾದ ಬಳಿಕ ಕತ್ತಲು ಆವರಿಸಿದ್ದರೂ, ಫೋನ್ ನಲ್ಲಿ ಚಿತ್ರೀಕರಣ ಮುಂದುವರಿದಿದೆ. ಗಾಯಾಳು ಯುವಕನೊಬ್ಬ ತನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ; ನನ್ನನ್ನು ರಕ್ಷಿಸಿ ಎಂದು ಜನರ ಬಳಿ ದೈನ್ಯತೆಯಿಂದ ಬೇಡಿಕೊಳ್ಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಉದಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಆರು ಮಂದಿ ಸ್ನೇಹಿತರು ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಹಳೆ ಅಹ್ಮದಾಬಾದ್ ಹೆದ್ದಾರಿಗೆ ಚಹಾ ಸೇವನೆಗಾಗಿ ತಿರುಗಿದ್ದರು. ಈ ವೇಳೆ ಗುಜರಾತ್ ಗೆ ಕಡೆಗೆ ಹೊರಟಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಮೊಹ್ಮದ್ ಅಯಾನ್ (17), ಅದಿಲ್ ಖುರೇಷಿ (14), ಶೇರ್ ಮೊಹ್ಮದ್ (19) ಮತ್ತು ಗುಲಾಮ್ ಖ್ವಾಜಾ (17) ಮೃತಪಟ್ಟರು. ಕಾರಿನಲ್ಲಿದ್ದ ಇತರ ಇಬ್ಬರಿಗೆ ಹಾಗೂ ಮತ್ತೊಂದು ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ.