×
Ad

Tamil Nadu | ಮಧುರೈನ LIC ಕಚೇರಿಯಲ್ಲಿನ ಬೆಂಕಿ ಪ್ರಕರಣಕ್ಕೆ ತಿರುವು: ದಾಖಲೆ ಅಕ್ರಮ ಮುಚ್ಚಿ ಹಾಕಲು ವ್ಯವಸ್ಥಾಪಕಿಯ ಕೊಲೆ ಎಂದು ಬಹಿರಂಗ

Update: 2026-01-21 13:50 IST

ಸಾಂದರ್ಭಿಕ ಚಿತ್ರ (AI)

ಮಧುರೈ: ಮಧುರೈಯಲ್ಲಿನ LIC ಕಚೇರಿಯಲ್ಲಿ ಸಂಭವಿಸಿದ್ದ ಆಕಸ್ಮಿಕ ಬೆಂಕಿ ಪ್ರಕರಣವು, ವಾಸ್ತವದಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕಿಯೊಬ್ಬರ ಹತ್ಯೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಡಿ. 17ರ ರಾತ್ರಿ ಸುಮಾರು 8.15ರ ವೇಳೆಗೆ ಎಲ್‌ಐಸಿ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹಿರಿಯ ಶಾಖಾ ವ್ಯವಸ್ಥಾಪಕಿ ಕಲ್ಯಾಣಿ ನಂಬಿ (55) ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಘಟನೆ ಎಂದು ಪರಿಗಣಿಸಲಾಗಿತ್ತು.

ಆದರೆ ತನಿಖೆಯಲ್ಲಿ ಸಹಾಯಕ ಆಡಳಿತಾಧಿಕಾರಿ ರಾಮ್ (45), ದಾಖಲೆಯ ಅಕ್ರಮಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕಲ್ಯಾಣಿ ನಂಬಿ ಅವರನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಯಾಣಿ ನಂಬಿ ಅವರು ಶಾಖೆಯ ಉಸ್ತುವಾರಿ ವಹಿಸಿಕೊಂಡ ಬಳಿಕ, ರಾಮ್‌ ಗೆ ಸಂಬಂಧಿಸಿದ ದಾಖಲೆಗಳ ಅಕ್ರಮಗಳ ತನಿಖೆ ಆರಂಭಿಸಿದ್ದರು. ಘಟನೆಯ ದಿನ ರಾಮ್ ದಾಖಲೆಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟುಹಾಕುತ್ತಿದ್ದುದನ್ನು ಗಮನಿಸಿದ ಕಲ್ಯಾಣಿ ನಂಬಿ ತಮ್ಮ ಮಗನಿಗೆ ಕರೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ರಾಮ್ ವ್ಯವಸ್ಥಾಪಕಿ ಕಲ್ಯಾಣಿ ಅವರ ಮೇಲೆ ಪೆಟ್ರೋಲ್ ಸುರಿದು, ಉರಿಯುತ್ತಿದ್ದ ಕೋಣೆಯೊಳಗೆ ತಳ್ಳಿ, ಹೊರಗಿನಿಂದ ಬಾಗಿಲು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ರಾಮ್‌ ನ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಅವನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ, ಪೊಲೀಸರ ಅನುಮಾನ ರಾಮ್ ಮೇಲೆಯೇ ಕೇಂದ್ರೀಕೃತವಾಯಿತು.

ಮೃತರ ಮಗ ಲಕ್ಷ್ಮಿ ನಾರಾಯಣನ್ (25) ತಿಲಗರ್ ತಿಡಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣಕ್ಕೆ ತಿರುವು ದೊರಕಿತು. ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ದೃಢಪಟ್ಟಿದೆ.

ಪೊಲೀಸರ ವಿಚಾರಣೆಯಲ್ಲಿ, ಕಳೆದ ವರ್ಷ ಮೇ ತಿಂಗಳಲ್ಲಿ ತಿರುನಲ್ವೇಲಿಯಿಂದ ವರ್ಗಾವಣೆಯಾಗಿ ಬಂದಿದ್ದ ಕಲ್ಯಾಣಿ ನಂಬಿ, ತಮ್ಮ ಸೇವಾವಧಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ದಾಖಲೆ ಅಕ್ರಮಗಳ ತನಿಖೆ ನಡೆಸುತ್ತಿದ್ದರು ಎಂದು ರಾಮ್ ಒಪ್ಪಿಕೊಂಡಿದ್ದಾನೆ.

ಜ. 20ರಂದು ತಿಲಗರ್ ತಿಡಲ್ ಪೊಲೀಸರು ರಾಮ್‌ ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರಾಜಾಜಿ ಆಸ್ಪತ್ರೆಯಲ್ಲಿ ಬುಧವಾರ ಮ್ಯಾಜಿಸ್ಟ್ರೇಟ್ ಮುಂದೆ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಅಳಗಿಯ ನಂಬಿ (61, ನಿವೃತ್ತ ಆಲ್ ಇಂಡಿಯಾ ರೇಡಿಯೋ ಉದ್ಯೋಗಿ) ಮತ್ತು ಮಗನೊಂದಿಗೆ ಪೊನ್ಮೇನಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಲ್ಯಾಣಿ ನಂಬಿ, ಕಚೇರಿ ವಂಚನೆಗಳ ತನಿಖೆಯಲ್ಲಿ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News