Odisha | ಪಾದ್ರಿಯ ಮೇಲೆ ಗುಂಪು ಹಲ್ಲೆ; ಸಗಣಿ ತಿನ್ನಿಸಿ ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯ; ವರದಿ
ಧೆಂಕನಲ್ (ಒಡಿಶಾ): ಧೆಂಕನಲ್ ಜಿಲ್ಲೆಯ ಪರ್ಜಂಗ್ ಗ್ರಾಮದಲ್ಲಿ ಪಾದ್ರಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಹಸುವಿನ ಸಗಣಿ ತಿನ್ನಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ಜ. 4ರಂದು ನಡೆದಿದೆ ಎಂದು ವರದಿಯಾಗಿದೆ.
ಪಾದ್ರಿ ಬಿಪಿನ್ ಬಿಹಾರಿ ನಾಯಕ್ ಅವರ ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದ ವೇಳೆ ಸುಮಾರು 40 ಮಂದಿಯ ಗುಂಪು ಬಲವಂತವಾಗಿ ಪ್ರವೇಶಿಸಿ ಹಲ್ಲೆ ನಡೆಸಿದೆ ಎಂದು Maktoob Media ವರದಿ ಮಾಡಿದೆ. ಸಭೆಯಲ್ಲಿ ಬಿಪಿನ್ ನಾಯಕ್ ಅವರ ಕುಟುಂಬದೊಂದಿಗೆ ಇನ್ನೂ ಏಳು ಕುಟುಂಬಗಳು ಭಾಗವಹಿಸಿದ್ದವು ಎಂದು ತಿಳಿದು ಬಂದಿದೆ.
ನಾಯಕ್ ಅವರ ಪತ್ನಿ ವಂದನಾ ಅವರ ಪ್ರಕಾರ, ಗುಂಪು ಮನೆಯೊಳಗಿನವರ ಮೇಲೆ ಹಲ್ಲೆ ಮಾಡಲು ಆರಂಭಿಸಿದಾಗ ಅವರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿದರು. ನಾಯಕ್ ಅವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿ, ಮುಖಕ್ಕೆ ನಾಮ ಬಳಿದು, ಚಪ್ಪಲಿ ಹಾರ ಹಾಕಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಅವರನ್ನು ಗ್ರಾಮದ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು ಕಟ್ಟಿಹಾಕಿ, ಹಸುವಿನ ಸಗಣಿ ತಿನ್ನುವಂತೆ ಹಾಗೂ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಬಲವಂತಪಡಿಸಲಾಗಿದೆ ಎಂದು ವಂದನಾ ಆರೋಪಿಸಿದ್ದಾರೆ. ಹಲ್ಲೆಯಿಂದ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ನೆರವು ದೊರಕಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ನಾಯಕ್ ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಠಾಣೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಪರ್ಜಂಗ್ ಗ್ರಾಮದಲ್ಲಿ ಕೇವಲ ಏಳು ಕ್ರಿಶ್ಚಿಯನ್ ಕುಟುಂಬಗಳು ವಾಸಿಸುತ್ತಿವೆ. ನಾಯಕ್ ಬಲವಂತದ ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಘಟನೆಯ ಬಳಿಕ ನಾಯಕ್ ವಿರುದ್ಧವೂ ಬಲವಂತದ ಮತಾಂತರ ಆರೋಪದಡಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.