×
Ad

ಮಹಾರಾಷ್ಟ್ರ | ಮೇಯರ್ ಪಟ್ಟಕ್ಕಾಗಿ ರಾಜ್ ಠಾಕ್ರೆಯ ಎಂಎನ್ಎಸ್ ಜೊತೆ ಶಿಂಧೆ ಶಿವಸೇನಾ ಮೈತ್ರಿ!

ಕಲ್ಯಾಣ್–ಡೊಂಬಿವಿಲಿಯಲ್ಲಿ ಬಿಜೆಪಿಯ ಮೇಯರ್ ಕನಸು ಭಗ್ನ!

Update: 2026-01-21 16:59 IST

ಏಕನಾಥ್ ಶಿಂದೆ , ರಾಜ್ ಠಾಕ್ರೆ | Photo Credit : PTI 

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯತೊಡಗಿವೆ. ಕ್ಷಣಕ್ಷಣಕ್ಕೂ ಮೈತ್ರಿಕೂಟಗಳು ಬದಲಾಗತೊಡಗಿದ್ದು, ಇದೀಗ ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆಯ ಸರದಿಯಾಗಿದೆ. ಇಲ್ಲಿ ಮೇಯರ್ ಆಗುವ ಕನಸು ಕಾಣುತ್ತಿದ್ದ ಬಿಜೆಪಿಯ ಕನಸನ್ನು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೈತ್ರಿಕೂಟ ಭಗ್ನಗೊಳಿಸಿವೆ. ತಮ್ಮ ಹಳೆಯ ಕಹಿ ನೆನಪುಗಳನ್ನು ಪಕ್ಕಕ್ಕಿಟ್ಟಿರುವ ಈ ಎರಡು ಪಕ್ಷಗಳು, ಬಿಜೆಪಿಯನ್ನು ಮೇಯರ್ ಹುದ್ದೆಯಿಂದ ಹೊರಗಿಡುವಲ್ಲಿ ಯಶಸ್ವಿಯಾಗಿವೆ.

122 ಸದಸ್ಯ ಬಲದ, ಏಕನಾಥ್ ಶಿಂದೆ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆ ಚುನಾವಣೆಯಲ್ಲಿ 50 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ಬಿಜೆಪಿ ಪ್ರಬಲ ಪ್ರದರ್ಶನವನ್ನೇ ನೀಡಿತ್ತು. ಮತ್ತೊಂದೆಡೆ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು ಹಾಗೂ ಎಂಎನ್ಎಸ್ 5 ಸ್ಥಾನಗಳಲ್ಲಿ ಜಯ ದಾಖಲಿಸಿತ್ತು. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ 11 ಸ್ಥಾನಗಳನ್ನು ಗೆದ್ದಿತ್ತು. ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 62 ಆಗಿದೆ.

ಆದರೆ, ಮಹಾಯುತಿ ಸರಕಾರದಲ್ಲಿ ಬಿಜೆಪಿ ಹಾಗೂ ಏಕನಾಥ್ ಶಿಂದೆಯ ಶಿವಸೇನೆ ಮಿತ್ರ ಪಕ್ಷಗಳಾಗಿದ್ದರೂ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆ ಮೇಯರ್ ಹುದ್ದೆಯನ್ನು ವಶಪಡಿಸಿಕೊಳ್ಳಲು ಒಂದಾಗಿವೆ.

ಕೊಂಕಣ ಭವನದಲ್ಲಿ ನಡೆದ ಸಭೆಯ ನಂತರ, ಏಕನಾಥ್ ಶಿಂದೆಯ ಪುತ್ರ ಹಾಗೂ ಶಿವಸೇನೆ ಸಂಸದ ಶ್ರೀಕಾಂತ್ ಶಿಂದೆ ರಾಜ್ ಠಾಕ್ರೆ ಪಕ್ಷದೊಂದಿಗಿನ ಮೈತ್ರಿಯನ್ನು ದೃಢಪಡಿಸಿದ್ದಾರೆ. ಇದರಿಂದಾಗಿ ಶಿವಸೇನೆ-ಎಂಎನ್ಎಸ್ ಮೈತ್ರಿಕೂಟದ ಸಂಖ್ಯೆ 58ಕ್ಕೆ ಏರಿಕೆಯಾದಂತಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಕೆಲ ಕಾರ್ಪೊರೇಟರ್ ಗಳೂ ಈ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಸಾಧ್ಯತೆ ಇದ್ದು, ಈ ಮೈತ್ರಿಕೂಟ ಬಿಜೆಪಿಯನ್ನು ಮೇಯರ್ ಪಟ್ಟದಿಂದ ಹೊರಗಿಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News