×
Ad

Kerala | ದೀಪಕ್ ಆತ್ಮಹತ್ಯೆ ಪ್ರಕರಣ: ಅನುಚಿತ ವರ್ತನೆ ಆರೋಪಿಸಿ ವೀಡಿಯೋ ವೈರಲ್ ಮಾಡಿದ ಯೂಟ್ಯೂಬರ್ ಶಿಮ್ಜಿತಾ ಬಂಧನ

Update: 2026-01-21 18:44 IST

 ಶಿಮ್ಜಿತಾ ಮುಸ್ತಫಾಳ , ದೀಪಕ್ ಯು | Photo Credit : NDTV 

ಕೋಝಿಕೋಡ್, ಜ.21: ಗೋವಿಂದಪುರಂ ನಿವಾಸಿ ದೀಪಕ್ ಯು ಅವರ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಶಿಮ್ಜಿತಾ ಮುಸ್ತಫಾಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ವಿಶೇಷ ತಂಡವು ಮಧ್ಯಾಹ್ನ ವಡಕರದಲ್ಲಿರುವ ಸಂಬಂಧಿಕರ ಮನೆಯಿಂದ ಶಿಮ್ಜಿತಾಳನ್ನು ವಶಕ್ಕೆ ಪಡೆದುಕೊಂಡಿತು. ನಂತರ ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಅವರನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಗೆ ಕರೆತರಲಾಯಿತು.

ಗಾರ್ಮೆಂಟ್ ಕಂಪೆನಿಯೊಂದರಲ್ಲಿ ಮಾರಾಟ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ದೀಪಕ್ (41) ಅವರು ರವಿವಾರ ಬೆಳಿಗ್ಗೆ ಮಾಂಕಾವುವಿನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಸ್ ಪ್ರಯಾಣದ ವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಶಿಮ್ಜಿತಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪ್ರಕಟಿಸಿದ ನಂತರ ಈ ಘಟನೆ ನಡೆದಿದೆ. ಆ ವೀಡಿಯೊ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಅರೀಕೋಡ್‌ನ ಮಾಜಿ ಪಂಚಾಯತ್ ಸದಸ್ಯೆಯಾಗಿರುವ ಶಿಮ್ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕೋಝಿಕೋಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಿಮ್ಜಿತಾ ಅರ್ಜಿ ಸಲ್ಲಿಸಿದ್ದಳು. ಪ್ರಕರಣ ದಾಖಲಾದ ಬಳಿಕ ಆಕೆ ತಲೆಮರೆಸಿಕೊಂಡಿದ್ದರಿಂದ, ಶಿಮ್ಜಿತಾ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಆರೋಪಿಯು ದೇಶ ಬಿಟ್ಟು ತೆರಳದಂತೆ ಲುಕ್‌ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು.

ಈ ನಡುವೆ, ಬಿಜೆಪಿ ಕಾರ್ಯಕರ್ತರ ಗುಂಪೊಂದು ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತು. ಆರೋಪಿಯನ್ನು ಖಾಸಗಿ ವಾಹನಗಳಲ್ಲಿ ರಹಸ್ಯವಾಗಿ ಸ್ಥಳಾಂತರಿಸಿ ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಶಿಮ್ಜಿತಾಳನ್ನು ಕುನ್ನಮಂಗಲಂ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾದಾತ್ಮಕ ವೀಡಿಯೊವನ್ನು ರೆಕಾರ್ಡ್ ಮಾಡಲು ಬಳಸಲಾಗಿದೆ ಎನ್ನಲಾದ ಶಿಮ್ಜಿತಾಳ ಮೊಬೈಲ್ ಫೋನ್ ಮರುಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಗರುವ ವೀಡಿಯೊವನ್ನು ಹಲವು ಕ್ಲಿಪ್‌ಗಳನ್ನು ಬಳಸಿ ಎಡಿಟ್ ಮಾಡಲಾಗಿದೆ ಎಂಬ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಆರೋಪದ ಸತ್ಯಾಸತ್ಯತೆ, ದೃಶ್ಯಗಳ ನೈಜತೆ ಹಾಗೂ ವೀಡಿಯೊ ರೆಕಾರ್ಡ್ ಮಾಡಿರುವುದು ಮತ್ತು ಅದನ್ನು ವೈರಲ್ ಮಾಡಿರುವ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಮೂಲ ವೀಡಿಯೊಗಳನ್ನು ವಶಕ್ಕೆ ಪಡೆಯುವುದು ಅಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಈ ಹಿಂದೆ ಬಳಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

ಇದೇ ವೇಳೆ, ಆಲ್ ಕೇರಳ ಮೆನ್ಸ್ ಅಸೋಸಿಯೇಷನ್ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಕ್ರೈಮ್ ಬ್ರಾಂಚ್‌ಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ದೀಪಕ್ ಅವರ ಮನೆಗೆ ಭೇಟಿ ನೀಡಿದ ಸಂಘದ ಪ್ರತಿನಿಧಿಗಳು, ಮೃತರ ಕುಟುಂಬಕ್ಕೆ 3.17 ಲಕ್ಷ ರೂ. ಆರ್ಥಿಕ ಸಹಾಯವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News