ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ್ದನ್ನು ವಿರೋಧಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗೋಪಿನಾಥನ್
Photo credit: X/@kcvenugopalmp
ಹೊಸದಿಲ್ಲಿ : ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಆರು ವರ್ಷಗಳ ನಂತರ ಕಣ್ಣನ್ ಗೋಪಿನಾಥನ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
"ಕಣ್ಣನ್ ಗೋಪಿನಾಥನ್ ದೇಶದ ದೀನದಲಿತ ಮತ್ತು ದುರ್ಬಲ ಜನರ ಬಗ್ಗೆ ಕಾಳಜಿಯನ್ನು ಹೊಂದಿರುವ ಮತ್ತು ಯಾವಾಗಲೂ ನ್ಯಾಯ ಮತ್ತು ಏಕತೆಗಾಗಿ ಹೋರಾಡುವ ಧೈರ್ಯಶಾಲಿ ಅಧಿಕಾರಿಗಳಲ್ಲಿ ಒಬ್ಬರು” ಎಂದು ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು ವಿರೋಧಿಸಿ ಕಣ್ಣನ್ ಗೋಪಿನಾಥನ್ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಭಾರತೀಯ ಆಡಳಿತ ಸೇವೆಯಿಂದ ನಿವೃತ್ತಿ ಹೊಂದಿದ ಆರು ವರ್ಷಗಳ ನಂತರ ಕಣ್ಣನ್ ಗೋಪಿನಾಥನ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಣ್ಣನ್ ಗೋಪಿನಾಥನ್ 2012ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದರು. ಅವರು ಈಶಾನ್ಯ ರಾಜ್ಯಗಳಲ್ಲಿ ವಿಶೇಷವಾಗಿ ಐಝ್ವಾಲ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
"ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ತಿಳಿದಿದ್ದರೂ, ಸ್ವಂತ ಲಾಭ, ದುರಾಸೆ ಅಥವಾ ಉಳಿವಿಗಾಗಿ ಮೌನವಾಗಿರುವವರು ನಿಜವಾದ ದ್ರೋಶದ್ರೋಹಿಗಳು" ಎಂದು ಗೋಪಿನಾಥನ್ ಕಾಂಗ್ರೆಸ್ ಪಕ್ಷ ಸೇರಿದ ಬಳಿಕದ ಮೊದಲ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.