×
Ad

ಕನ್ವರ್ ಯಾತ್ರಾ ಮಾರ್ಗದ ತಿನಿಸುಗಳಿಗೆ QR ಕೋಡ್ ನಿಯಮ ಪ್ರಶ್ನಿಸಿ ಅರ್ಜಿ; ಪರಿಶೀಲನೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

Update: 2025-07-22 20:01 IST

PC : PTI

ಹೊಸದಿಲ್ಲಿ, ಜು. 22: ಕನ್ವರ್ ಯಾತ್ರಾ ಮಾರ್ಗದ ಹೋಟೆಲ್‌ಗಳು ಹಾಗೂ ಆಹಾರ ಮಾರಾಟಗಾರರಿಗೆ QR ಕೋಡ್ ಪ್ರದರ್ಶನ ಕುರಿತು ಸರ್ಕಾರ ಹೊರಡಿಸಿರುವ ನಿರ್ದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

“ಮಂಗಳವಾರ ಜು.22 ರಂದು ಯಾತ್ರೆಯ ಕೊನೆಯ ದಿನವಾಗಿದೆ, ಹೀಗಾಗಿ ಅರ್ಜಿಯ ವಿಚಾರಣೆ ನಿಷ್ಪ್ರಯೋಜಕವಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಧೀಶರಾದ ಎಂ.ಎಂ. ಸುಂದ್ರೇಶ್ ಮತ್ತು ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು ಅರ್ಜಿಗಳನ್ನು ವಿಲೀನಗೊಳಿಸಿ, ಎಲ್ಲಾ ಆಹಾರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರಗಳನ್ನು ಪ್ರದರ್ಶಿಸಬೇಕು ಎಂಬ ಕ್ರಮ ಮಾತ್ರ ಮುಂದುವರಿಯಬೇಕೆಂದು ಸೂಚನೆ ನೀಡಿದೆ.

ಪ್ರೊಫೆಸರ್ ಅಪೂರ್ವಾನಂದ್ ಮತ್ತು ಸಾಮಾಜಿಕ ಕಾರ್ಯಕರ್ತ ಆಕಾರ್ ಪಟೇಲ್ ಅವರು ಅರ್ಜಿ ಸಲ್ಲಿಸಿ, ಆಹಾರ ಮಾರಾಟಗಾರರನ್ನು ಧಾರ್ಮಿಕ ಗುರುತಿನ ಆಧಾರದಲ್ಲಿ ಪ್ರತ್ಯೇಕಿಸುವ ಉದ್ದೇಶದಿಂದ QR ಕೋಡ್ ನಿರ್ದೇಶನಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. 2024 ರ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಉಲ್ಲಂಘನೆಯನ್ನೂ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, “ಗುರುತು ಬಹಿರಂಗಪಡಿಸುವ ನಿಯಮಗಳು ಅಲ್ಪಸಂಖ್ಯಾತ ಸಮುದಾಯದ ವ್ಯಾಪಾರಿಗಳನ್ನು ಗುರಿಯಾಗಿಸುತ್ತಿವೆ. ಇದು ಗ್ರಾಹಕರಿಗೆ ಪಾರದರ್ಶಕತೆ ಎಂಬ ಹೆಸರಿನಲ್ಲಿ ವಿಭಜನೆ ತರಲಿದೆ” ಎಂದು ವಾದಿಸಿದರು. ಮತ್ತೊಬ್ಬ ಹಿರಿಯ ವಕೀಲ ಹುಜೆಫಾ ಅಹ್ಮದಿ ಕೂಡ, "ಒಂದು ರೆಸ್ಟೋರೆಂಟ್ ಸಸ್ಯಾಹಾರ ನೀಡುತ್ತಿದ್ದರೆ, ಹಿಂದಿನ ಮೆನು ಅಥವಾ ಮಾಲೀಕರ ಹೆಸರು ಅನಾವಶ್ಯಕ" ಎಂದು ಅಭಿಪ್ರಾಯಪಟ್ಟರು.

ಇದರ ವಿರುದ್ಧವಾಗಿ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ, “QR ಕೋಡ್ ನಿರ್ದೇಶನಗಳು ಆಹಾರ ಸುರಕ್ಷತೆ ಪ್ರಾಧಿಕಾರದ ನಿಯಮಗಳ ಪ್ರಕಾರವಾಗಿವೆ. ಹಿಂದಿನ ಕೆಲವು ದಾಬಾಗಳು ಮಾಂಸಾಹಾರಿ ಆಹಾರವನ್ನು ಸಸ್ಯಾಹಾರಿ ಎಂದು ತಪ್ಪಾಗಿ ಸೂಚಿಸಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕ್ರಮ ಅವಶ್ಯಕವಾಗಿದೆ” ಎಂದು ವಿವರಿಸಿದರು.

ಉತ್ತರಾಖಂಡ ಸರ್ಕಾರದ ಪರವಾಗಿ ಪ್ರತಿನಿಧಿಸಿದ್ದ ಜತಿಂದರ್ ಕುಮಾರ್ ಸೇಥಿಯೂ ಈ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಸುಂದ್ರೇಶ್, “ಗ್ರಾಹಕನೇ ರಾಜ. ಹಾಗಾಗಿ ಧಾರ್ಮಿಕ ಆಧಾರಿತ ವಿಭಜನೆ ನಡೆಯಬಾರದು", ಎಂದು ಬಲವಾದ ಸಂದೇಶ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News