×
Ad

ನ್ಯಾ. ಶೇಖರ್ ಕುಮಾರ್‌ ಯಾದವ್‌ ವಿರುದ್ಧ ಜಗದೀಪ ಧನ್ಕರ್ ಯಾಕೆ ಕ್ರಮ ಕೈಗೊಂಡಿಲ್ಲ? : ಕಪಿಲ್ ಸಿಬಲ್ ಪ್ರಶ್ನೆ

Update: 2025-06-11 20:02 IST

 ನ್ಯಾ. ಶೇಖರ್ ಕುಮಾರ್‌ ಯಾದವ್‌ , ಕಪಿಲ್ ಸಿಬಲ್ | PTI

ಹೊಸದಿಲ್ಲಿ: ರಾಜ್ಯಸಭೆಯ ಮಧ್ಯಪ್ರವೇಶದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ ಕುಮಾರ ಯಾದವ ಅವರ ವಿರುದ್ಧ ತನಿಖೆಯನ್ನು ಕೈಬಿಟ್ಟಿದೆ ಎಂಬ ವರದಿಗಳ ನಡುವೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಸಭಾಪತಿ ಜಗದೀಪ ಧನ್ಕರ್ ಅವರು ನ್ಯಾ. ಶೇಖರ್ ಕುಮಾರ್‌ ಯಾದವ್‌ ವಿರುದ್ಧದ ದೋಷಾರೋಪಣೆ ನೋಟಿಸ್ ಕುರಿತು ಯಾವುದೇ ಕ್ರಮವನ್ನೇಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಸಿಬಲ್, ಇಡೀ ಘಟನೆಯು ತಾರತಮ್ಯದಿಂದ ಕೂಡಿದೆ. ಕಳೆದ ವರ್ಷ ಸಂಪೂರ್ಣ ಕೋಮುವಾದಿ ಭಾಷಣವನ್ನು ಮಾಡಿದ್ದ ನ್ಯಾ.ಯಾದವ ಅವರನ್ನು ರಕ್ಷಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನ್ಯಾ.ಯಾದವ ವಿರುದ್ಧ ಅರ್ಜಿಯೊಂದು ರಾಜ್ಯಸಭೆಯಲ್ಲಿ ಬಾಕಿಯಿರುವುದರಿಂದ ಅವರ ವಿರುದ್ಧ ಆಂತರಿಕ ತನಿಖೆ ನಡೆಸದಂತೆ ರಾಜ್ಯಸಭೆಯ ಮಹಾ ಕಾರ್ಯದರ್ಶಿಗಳು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆ. ಆದರೆ ನ್ಯಾ.ಯಶವಂತ ವರ್ಮಾ ಅವರ ಪ್ರಕರಣದಲ್ಲಿ ಇದನ್ನು ಮಾಡಿರಲಿಲ್ಲ ಎಂದು ಹೇಳಿದ ಸಿಬಲ್,‘ನ್ಯಾ.ವರ್ಮಾ ವಿರುದ್ಧ ಆಂತರಿಕ ತನಿಖೆಯ ಬಗ್ಗೆ ನೀವೇಕೆ ಪತ್ರ ಬರೆದಿರಲಿಲ್ಲ? ಹೀಗಾಗಿ ಈ ಸರಕಾರವು ನ್ಯಾ.ಯಾದವರನ್ನು ರಕ್ಷಿಸಲು ಬಯಸಿದೆ ಎಂದು ನಾವು ಭಾವಿಸಿದ್ದೇವೆ’ ಎಂದು ಹೇಳಿದರು.

ಡಿ.8,2024ರಂದು ವಿಹಿಂಪ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯ ಕುರಿತು ಮಾತನಾಡಿದ್ದ ನ್ಯಾ.ಯಾದವ, ಮುಸ್ಲಿಮರು ತಮ್ಮ ಸಂಸ್ಕೃತಿಯನ್ನು ಅನುಸರಿಸಬೇಕು ಎಂದು ಹಿಂದುಗಳು ನಿರೀಕ್ಷಿಸಿಲ್ಲ, ಆದರೆ ಅದನ್ನು ಅವರು ಅಗೌರವಿಬಾರದು ಎಂದಷ್ಟೇ ಬಯಸುತ್ತಾರೆ. ಈ ದೇಶವು ಬಹುಸಂಖ್ಯಾತರ ಇಚ್ಛೆಯಂತೆ ನಡೆಯುತ್ತದೆ ಮತ್ತು ಯುಸಿಸಿ ಶೀಘ್ರವೇ ಸಾಕಾರಗೊಳ್ಳಲಿದೆ ಎಂದು ಹೇಳಿದ್ದರು.

ಡಿ.13, 2024ರಂದು ರಾಜ್ಯಸಭೆಯಲ್ಲಿ ಹಲವಾರು ಪ್ರತಿಪಕ್ಷಗಳ ಸದಸ್ಯರು ನ್ಯಾ.ಯಾದವ ಅವರ ಹೇಳಿಕೆಗಳ ಕುರಿತು ಅವರ ವಿರುದ್ಧ ದೋಷಾರೋಪಣೆ ನೋಟಿಸ್ ಸಲ್ಲಿಸಿದ್ದರು. ಸಿಬಲ್, ಜೈರಾಮ ರಮೇಶ್‌,ವಿವೇಖ ತಂಖಾ, ದಿಗ್ವಿಜಯ ಸಿಂಗ್, ಜಾನ್ ಬ್ರಿಟ್ಟಾಸ್, ಮನೋಜ ಕುಮಾರ ಝಾ ಮತ್ತು ಸಾಕೇತ ಗೋಖಲೆ ಸೇರಿದಂತೆ 55 ಪ್ರತಿಪಕ್ಷ ಸದಸ್ಯರು ದೋಷಾರೋಪಣೆ ನೋಟಿಸ್‌ಗೆ ಸಹಿ ಮಾಡಿದ್ದರು.

ಆರು ತಿಂಗಳುಗಳು ಕಳೆದಿದ್ದರೂ ದೋಷಾರೋಪಣೆ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಬೆಟ್ಟು ಮಾಡಿದ ಸಿಬಲ್, ‘ನಾವು ಸುಪ್ರೀಂ ಕೋರ್ಟ್‌ಗೆ ಹೋಗುವಂತಾಗಲು ನಮ್ಮ ನೋಟಿಸಿನ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ ಅಥವಾ ನೋಟಿಸಿನಲ್ಲಿನ ಕೆಲವು ಸಹಿಗಳನ್ನು ತಿರಸ್ಕರಿಸಿ ಅದನ್ನು ತಳ್ಳಿ ಹಾಕಲಾಗುತ್ತದೆ. ಸುಪ್ರೀಂ ಕೋರ್ಟ್ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು 2026ರಲ್ಲಿ ನ್ಯಾ.ಯಾದವ್‌ ನಿವೃತ್ತರಾಗುತ್ತಾರೆ ಎನ್ನುವುದು ಇಲ್ಲಿಯ ಲೆಕ್ಕಾಚಾರವಾಗಿದೆ’ ಎಂದು ಹೇಳಿದರು.

ರಾಜ್ಯಸಭೆಯ ಸಭಾಪತಿಗಳು ಆಂತರಿಕ ತನಿಖೆ ನಡೆಸದಂತೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಬೇಕೇ? ಆಂತರಿಕ ತನಿಖಾ ಪ್ರಕ್ರಿಯೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಸೇರಿದ್ದಾಗಿದೆ ಮತ್ತು ಅದಕ್ಕೂ ದೋಷಾರೋಪಣೆ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ. ಈವರೆಗೆ ದೋಷಾರೋಪಣೆ ಪಟ್ಟಿಯನ್ನು ಅಂಗೀಕರಿಸಿಯೂ ಇಲ್ಲ. ಆರು ತಿಂಗಳುಗಳು ಕಳೆದಿವೆ ಮತ್ತು ಇನ್ನೂ ಕೇವಲ ಸಹಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News