ಎಕ್ಸ್’ನಲ್ಲಿ ‘ಕರ್ನಾಟಕದ ಸುಪ್ರೀಂ ಕೋರ್ಟ್’ಖಾತೆ!
ಬೆಂಗಳೂರು, ಜು. 18: ಕರ್ನಾಟಕ ಹೈಕೋರ್ಟ್ನಲ್ಲಿ ಶುಕ್ರವಾರ ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನಿರ್ಬಂಧಿತ ಆನ್ಲೈನ್ ಚಟುವಟಿಕೆಗಳ ಅಪಾಯಗಳ ಬಗ್ಗೆ ಎಚ್ಚರಿಸಿದರು. ‘‘ಕರ್ನಾಟಕದ ಸುಪ್ರೀಂ ಕೋರ್ಟ್’’ ಎಂಬ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸೃಷ್ಟಿಸಲಾಗಿದೆ ಹಾಗೂ ಇದು ಪರಿಶೀಲನೆಗೂ ಒಳಪಟ್ಟಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ದೈತ್ಯ ‘ಎಕ್ಸ್ ಕಾರ್ಪ್’ ದಾಖಲಿಸಿದ ಪ್ರಕರಣದಲ್ಲಿ ಹಾಜರಾದ ಅವರು, ‘‘ಕರ್ನಾಟಕ ಸುಪ್ರೀಂ ಕೋರ್ಟ್’’ ಎಂಬ ಹೆಸರಿನ ನಕಲಿ ಖಾತೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಸಾರ್ವಜನಿಕರನ್ನು ತಪ್ಪುದಾರಿಗೆಳೆಯಲು ಡಿಜಿಟಲ್ ವೇದಿಕೆಗಳನ್ನು ಹೇಗೆ ಎಷ್ಟು ಸುಲಭವಾಗಿ ದುರುಪಯೋಗಪಡಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
‘‘ಈ ಖಾತೆಯನ್ನು ನಾವು ಸೃಷ್ಟಿಸಿದ್ದೇವೆ. ಮತ್ತು ಎಕ್ಸ್ ಕಂಪೆನಿಯು ಅದರ ಪರಿಶೀಲನೆಯನ್ನೂ ಮಾಡಿದೆ. ಈಗ ನಾನು ಅದರಲ್ಲಿ ಏನು ಬೇಕಾದರೂ ಬರೆಯಬಹುದು. ಇದನ್ನು ಕರ್ನಾಟಕದ ಸುಪ್ರೀಂ ಕೋರ್ಟ್ ಹೇಳಿದೆ ಎಂಬುದಾಗಿ ಲಕ್ಷಾಂತರ ಜನರು ನಂಬುತ್ತಾರೆ’’ ಎಂದು ಮೆಹ್ತಾ ವಾದಿಸಿದರು.
ಮಾಹಿತಿ ತಂತ್ರಜ್ಞಾನ ಕಾಯಿದೆಯ 79ನೇ ಪರಿಚ್ಛೇದದಡಿ ಸರಕಾರಿ ಅಧಿಕಾರಿಗಳು ಹೊರಡಿಸಿರುವ ‘ಟೇಕ್ಡೌನ್’ (ಖಾತೆಗಳನ್ನು ಅಳಿಸಿಹಾಕುವಂತೆ ಸೂಚಿಸುವ) ಆದೇಶಗಳನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಈ ನಾಟಕೀಯ ಬೆಳವಣಿಗೆ ಸಂಭವಿಸಿತು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಕ್ಸ್ ಕಾರ್ಪ್ ಪರ ವಕೀಲ ಕೆ.ಜಿ. ರಾಘವನ್, ಇಂಥ ಪುರಾವೆಗಳನ್ನು ಔಪಚಾರಿಕವಾಗಿ ನ್ಯಾಯಾಲಯದ ದಾಖಲೆಗೆ ಸಲ್ಲಿಸದೆ ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸುವಂತಿಲ್ಲ ಎಂದು ಹೇಳಿದರು. ‘‘ಪರಿಶೀಲನೆ ಅಥವಾ ಹಿನ್ನೆಲೆ ಇಲ್ಲದೆ ನೀವು ಇದನ್ನು ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸುವಂತಿಲ್ಲ’’ ಎಂದು ಅವರು ಹೇಳಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎಮ್. ನಾಗಪ್ರಸನ್ನ, ರಾಘವನ್ ರ ಆತಂಕವನ್ನು ಒಪ್ಪಿಕೊಂಡರಾದರೂ, ಸಾಲಿಸಿಟರ್ ಜನರಲ್ ಈ ವಿಷಯವನ್ನು ಉದಾಹರಣೆಯಾಗಿಯಷ್ಟೇ ನೀಡಿದರು ಎಂದು ಹೇಳಿದರು. ‘‘ಇಂಥ ನಕಲಿ ಖಾತೆಗಳನ್ನು ಸೃಷ್ಟಿಸುವುದು ತೀರಾ ಸುಲಭ ಎನ್ನುವುದಷ್ಟೇ ಅವರ ವಾದವಾಗಿತ್ತು’’ ಎಂದು ನ್ಯಾಯಾಧೀಶರು ಹೇಳಿದರು.
ಬಳಿಕ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲ ರಾಘವನ್, ಈ ನಕಲಿ ಖಾತೆಯನ್ನು ಎಕ್ಸ್ ತೆಗೆದುಹಾಕಿದೆ ಎಂದು ಹೇಳಿದರು.