‘ಆಪರೇಷನ್ ಸಿಂಧೂರ’ ಬಳಿಕ ಕರ್ತಾರ್‌ಪುರ ಕಾರಿಡಾರ್ ಬಂದ್; ಅಟ್ಟಾರಿ ಗಡಿಯಲ್ಲಿ ‘ಬೀಟಿಂಗ್ ರಿಟ್ರೀಟ್’ ರದ್ದು
PC : PTI
ಚಂಡಿಗಡ : ‘ಆಪರೇಷನ್ ಸಿಂಧೂರ’ ಬಳಿಕ ಪಂಜಾಬಿನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್ ನಿಂದ ಪಾಕಿಸ್ತಾನದ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಗುರುದ್ವಾರಾವರೆಗಿನ ಕರ್ತಾರ್ ಪುರ ಕಾರಿಡಾರನ್ನು ಯಾತ್ರಿಗಳಿಗೆ ಮುಚ್ಚಲಾಗಿದೆ. ಅಮೃತಸರ ಸಮೀಪದ ಅಟ್ಟಾರಿ ಗಡಿಯಲ್ಲಿ ‘ಬೀಟಿಂಗ್ ರಿಟ್ರೀಟ್’ ಸಮಾರಂಭವನ್ನೂ ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ.
ಕರ್ತಾರ್ ಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರಾಕ್ಕೆ ತೆರಳಲು ಬುಧವಾರ ಬೆಳಿಗ್ಗೆ ಕರ್ತಾರ್ ಪುರ ಕಾರಿಡಾರ್ ಗೆ ಆಗಮಿಸಿದ್ದ ಸುಮಾರು 100 ಸಿಖ್ ಭಕ್ತರನ್ನು ಚೆಕ್‌ಪೋಸ್ಟ್ ಬಳಿ ತಡೆಯಲಾಗಿತ್ತು ಮತ್ತು ಒಂದೂವರೆ ಗಂಟೆಯ ಬಳಿಕ ಅವರಿಗೆ ಮನೆಗಳಿಗೆ ಮರಳುವಂತೆ ಸೂಚಿಸಲಾಯಿತು ಎಂದು ಬಲ್ಲ ಮೂಲಗಳು ತಿಳಿಸಿದವು.
ನಸುಕಿನಿಂದಲೇ ಸಂಘರ್ಷ ಆರಂಭಗೊಂಡಿರುವುದರಿಂದ ತಮ್ಮನ್ನು ಪಾಕಿಸ್ತಾನಕ್ಕೆ ದಾಟಲು ಅವಕಾಶ ನೀಡದಿರಬಹುದು ಎಂಬ ಆತಂಕದ ನಡುವೆಯೇ ಯಾತ್ರಿಗಳು ಕಾರಿಡಾರ್ ತಲುಪಿದ್ದರು.
‘ಪರಿಸ್ಥಿತಿಯು ಅನುಕೂಲಕರವಾಗಿಲ್ಲ ಎಂದು ನಮಗೆ ತಿಳಿಸಿದ ಅಧಿಕಾರಿಗಳು ಮನೆಗಳಿಗೆ ಮರಳುವಂತೆ ನಮಗೆ ಸೂಚಿಸಿದ್ದರು. ರಾಷ್ಟ್ರೀಯ ಹಿತಾಸಕ್ತಿ ಎಲ್ಲಕ್ಕಿಂತ ಹೆಚ್ಚಿನದು’ ಓರ್ವ ಯಾತ್ರಿ ಹೇಳಿದರು.
ಕರ್ತಾರ್ ಪುರ ಕಾರಿಡಾರನ್ನು ಮುಚ್ಚಿರುವುದನ್ನು ದೃಢಪಡಿಸಿದ ಹಿರಿಯ ಅಧಿಕಾರಿಯೋರ್ವರು,ಬುಧವಾರ ಬೆಳಿಗ್ಗೆ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಾಕ್ಕೆ ಭೇಟಿ ನೀಡಲು ಸುಮಾರು 500 ಯಾತ್ರಿಗಳು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಸುಮಾರು 100 ಯಾತ್ರಿಕರು ಆಗಮಿಸಿದ್ದರು, ಆದರೆ ಕಾರಿಡಾರ್ ಮುಚ್ಚಿರುವುದರಿಂದ ತಮ್ಮ ಮನೆಗಳಿಗೆ ಮರಳುವಂತೆ ಅವರಿಗೆ ಸೂಚಿಸಲಾಯಿತು ಎಂದು ತಿಳಿಸಿದರು.
ಗೃಹ ವ್ಯವಹಾರಗಳ ಸಚಿವಾಲಯದ ವಲಸೆ ಘಟಕವು ಮುಂದಿನ ಸೂಚನೆಯವರೆಗೆ ಕರ್ತಾರ್‌ಪುರ ಕಾರಿಡಾರ್‌ನ್ನು ಮುಚ್ಚಲಾಗಿದೆ ಎಂದು ಪ್ರಕಟಿಸಿದೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಅಟ್ಟಾರಿ ಗಡಿಯಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನೂ ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ.