8 ವರ್ಷಗಳ ನಂತರ ಟೆಸ್ಟ್ ಕ್ರಿಕೆಟಿಗೆ ಮರಳಿದ ಕರುಣ್ ನಾಯರ್
ಕರುಣ್ ನಾಯರ್ | PTI
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯಕ್ಕೆ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಹೆಸರಿಸಿರುವ ಆಡುವ 11ರ ಬಳಗದಲ್ಲಿ 33ರ ಹರೆಯದ ಕರುಣ್ ನಾಯರ್ ಸ್ಥಾನ ಪಡೆದಿದ್ದಾರೆ. ನಾಯರ್ 7 ವರ್ಷಕ್ಕೂ ಅಧಿಕ ಸಮಯದ ನಂತರ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. 2017ರ ಮಾರ್ಚ್ ನಲ್ಲಿ ಕೊನೆಯ ಬಾರಿ ಆಡಿದ್ದರು.
ನಾಯರ್ 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡದಲ್ಲಿದ್ದರು. ಆದರೆ ಅವರು ಆಡುವ ಅವಕಾಶ ಪಡೆದಿರಲಿಲ್ಲ. ಸುಮಾರು 8 ವರ್ಷಗಳ ನಂತರ ಇಂಗ್ಲೆಂಡ್ ವಾತಾವರಣದಲ್ಲಿ ಟೆಸ್ಟ್ ಆಡುವ ಅವಕಾಶ ಪಡೆದಿದ್ದಾರೆ.
ಈ ತಿಂಗಳಾರಂಭದಲ್ಲಿ ಕ್ಯಾಂಟರ್‌ಬರಿಯಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಇಂಗ್ಲೆಂಡ್ ಲಯನ್ಸ್ ವಿರುದ್ದ 204 ರನ್ ಗಳಿಸಿದ್ದ ಕರುಣ್ ಅವರು ಭಾರತ ತಂಡಕ್ಕೆ ಪುನರಾಮನವಾಗುವ ವಿಶ್ವಾಸ ಮೂಡಿಸಿದ್ದರು. ಕರುಣ್‌ಗೆ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಆಡಿರುವ ಅನುಭವವಿದೆ. 2023 ಹಾಗೂ 2024ರಲ್ಲಿ ನಾರ್ಥಾಂಪ್ಟನ್ ಶೈರ್ ಪರ ಆಡಿದ್ದರು.
‘‘ತಂಡದಿಂದ ಕೈಬಿಟ್ಟಾಗ ಭಾರತ ತಂಡಕ್ಕಾಗಿ ಮತ್ತೆ ಟೆಸ್ಟ್ ಕ್ರಿಕೆಟ್ ಆಡಬೇಕೆನ್ನುವುದು ನನ್ನ ಪ್ರತಿದಿನದ ಯೋಚನೆ ಆಗಿತ್ತು. ಆ ನಂಬಿಕೆಯೇ ನನ್ನನ್ನು ತರಬೇತಿಗೆ ಹೋಗಲು, ಪ್ರತಿದಿನ ಅಭ್ಯಾಸ ಮಾಡಲು ಪ್ರೇರಕ ಶಕ್ತಿಯಾಯಿತು’’ಎಂದು ಪಂದ್ಯಕ್ಕಿಂತ ಮೊದಲು ಬಿಸಿಸಿಐ ಹಂಚಿಕೊಂಡಿರುವ ವೀಡಿಯೊದಲ್ಲಿ ಕರುಣ್ ನಾಯರ್ ಹೇಳಿದ್ದಾರೆ.
‘‘ಈ ಬಾರಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಂದು ರೀತಿಯ ನೆಮ್ಮದಿಯ ವಾತಾವರಣವಿದೆ. ನಾನು ಬಾಲ್ಯದ ಗೆಳೆಯರಾದ ಕೆ.ಎಲ್.ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಅವರೊಂದಿಗೆ ಆಡುತ್ತಾ ಬೆಳೆದವನು. ಮೂವರು ಹಲವು ವರ್ಷಗಳಿಂದ ಒಟ್ಟಿಗೆ ಆಡಿದ್ದೇವೆ. ಈಗ ಅವರೊಂದಿಗೆ ಆಟವಾಡುವುದರಿಂದ ನನ್ನ ಈ ಪುನರಾಗಮನ ಹೆಚ್ಚು ವಿಶೇಷ ಎನಿಸುತ್ತಿದೆ’’ಎಂದು ಕನ್ನಡಿಗ ಕರುಣ್ ನಾಯರ್ ಅಭಿಪ್ರಾಯಪಟ್ಟರು.
►ಭಾರತದ ಆಡುವ 11ರ ಬಳಗದಲ್ಲಿ ಮೂವರು ಕನ್ನಡಿಗರು
ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಮೂವರು ಕನ್ನಡಿಗರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಬರೋಬ್ಬರಿ 8 ವರ್ಷಗಳ ನಂತರ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ತಂಡಕ್ಕೆ ವಾಪಸಾಗಿದ್ದಾರೆ.
ಕನ್ನಡಿಗರಾದ ಕರುಣ್ ನಾಯರ್, ಕೆ.ಎಲ್.ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ತಂಡದಲ್ಲಿದ್ದಾರೆ. ಈ ಮೂಲಕ ಮೂವರು ಕನ್ನಡಿಗರು ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
2017ರಲ್ಲಿ ಕರುಣ್ ನಾಯರ್ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ನಂತರ ಭಾರತ ತಂಢವು 77 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಕರುಣ್‌ಗೆ ಮತ್ತೆ ಅವಕಾಶ ಲಭಿಸಿರಲಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿರುವುದು 33ರ ಹರೆಯದ ಕರುಣ್‌ಗೆ ವರದಾನವಾಗಿದೆ. 2024-25ರ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಕರುಣ್ ಅವರು 54ರ ಸರಾಸರಿಯಲ್ಲಿ 863 ರನ್ ಗಳಿಸಿದ್ದರು. ಅಲ್ಲದೆ ವಿದರ್ಭ ಕ್ರಿಕೆಟ್ ತಂಡವು 3ನೇ ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕರುಣ್ ನಾಯರ್ ಈ ತನಕ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 63.33ರ ಸರಾರಿಯಲ್ಲಿ 374 ರನ್ ಗಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ(303 ರನ್)ಗಳಿಸಿದ ಭಾರತದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.