ಕರೂರು ಕಾಲ್ತುಳಿತ ಪ್ರಕರಣ | ಸ್ಟಾಲಿನ್, ವಿಜಯ್ ಜೊತೆ ಮಾತನಾಡಿದ ರಾಹುಲ್ ಗಾಂಧಿ
ಟಿವಿಕೆ ಅಧ್ಯಕ್ಷ ವಿಜಯ, ರಾಹುಲ್ ಗಾಂಧಿ | PTI
ಹೊಸದಿಲ್ಲಿ,ಸೆ.29: ತಮಿಳುನಾಡಿನ ಕರೂರಿನಲ್ಲಿ ಶನಿವಾರ ರಾಜಕೀಯ ರ್ಯಾಲಿ ವೇಳೆ ಕಾಲ್ತುಳಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಟಿವಿಕೆ ಅಧ್ಯಕ್ಷ ವಿಜಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೂರವಾಣಿಯಲ್ಲಿ ಸ್ಟಾಲಿನ್ ಜೊತೆ ಮಾತನಾಡಿದ ರಾಹುಲ್ ಘಟನೆಯ ಮತ್ತು ಗಾಯಾಳುಗಳಿಗೆ ಚಿಕಿತ್ಸೆಯ ಬಗ್ಗೆ ವಿಚಾರಿಸಿಕೊಂಡರು. ರಾಹುಲ್ ರ ಹೃತ್ಪೂರ್ವಕ ಕಳಕಳಿ ಮತ್ತು ಬೆಂಬಲಕ್ಕಾಗಿ ಸ್ಟಾಲಿನ್ ಎಕ್ಸ್ ಪೋಸ್ಟ್‌ನಲ್ಲಿ ಧನ್ಯವಾದಗಳನ್ನು ಹೇಳಿದ್ದಾರೆ.
ರಾಹುಲ್ ವಿಜಯ್ ಜೊತೆಗೂ ಮಾತನಾಡಿ ಅವರ ಬೆಂಬಲಿಗರ ಸಾವುಗಳ ಬಗ್ಗೆ ಸಂತಾಪಗಳನ್ನು ವ್ಯಕ್ತಪಡಿಸಿದರು.
ಸೆ.27ರಂದು ವಿಜಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ತನ್ನ ವಿರುದ್ಧ ಟೀಕೆಗಳು ಹೆಚ್ಚುತ್ತಿದ್ದಂತೆ ರವಿವಾರ ವಿಜಯ್ ಮೃತರ ಕುಟುಂಬಗಳಿಗೆ ತಲಾ 20 ಲ.ರೂ.ಮತ್ತು ಗಾಯಾಳುಗಳಿಗೆ ಎರಡು ಲ.ರೂ.ಪರಿಹಾರವನ್ನು ಘೋಷಿಸಿದ್ದಾರೆ.
ಕಾಲ್ತುಳಿತ ಘಟನೆಯ ಬಗ್ಗೆ ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಕೋರಿ ಟಿವಿಕೆ ಮದ್ರಾಸ್ ಹೈಕೋರ್ಟ್‌ನ ಮಧುರೆ ಪೀಠದ ಮೆಟ್ಟಲೇರಿದೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಕರೂರು ಪೋಲಿಸರು ಟಿವಿಕೆ ಪದಾಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪವನ್ನು ಹೊರಿಸಿದ್ದಾರೆ.