×
Ad

‘ಕಾಶ್ಮೀರ ಗಾಝಾ ಅಲ್ಲʼ: ನರೇಂದ್ರ ಮೋದಿ, ಅಮಿತ್‌ ಶಾ ಅವರನ್ನು ಮತ್ತೆ ಹೊಗಳಿದ ಶೆಹ್ಲಾ ರಶೀದ್‌

Update: 2023-11-15 16:28 IST

ಶೆಹ್ಲಾ ರಶೀದ್ (PTI)

ಹೊಸದಿಲ್ಲಿ: ಇಸ್ರೇಲ್‌ ಗಾಝಾ ಮೇಲೆ ಆಕ್ರಮಣ ನಡೆಸುತ್ತಿರುವ ನಡುವೆಯೇ, ʼಕಾಶ್ಮೀರ ಗಾಝಾ ಅಲ್ಲʼ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಮಂಗಳವಾರ ಹೇಳಿದ್ದಾರೆ.

ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡುತ್ತಾ, ಕಲ್ಲು ತೂರಾಟಗಾರರ ಬಗ್ಗೆ ನೀವು ಈ ಹಿಂದೆ ಸಹಾನುಭೂತಿ ಹೊಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಕೆ, "2010 ರಲ್ಲಿ, ಹೌದು (ಸಹಾನುಭೂತಿ ಹೊಂದಿದ್ದೆ)” ಎಂದು ಹೇಳಿದರು.

"ಆದರೆ ಇಂದು ಅದನ್ನು ನಾನು ನೋಡುವಾಗ, ಇಂದಿನ ಪರಿಸ್ಥಿತಿಗೆ ನಾನು ಹೆಚ್ಚು ಕೃತಜ್ಞನಾಗಿದ್ದೇನೆ. ಕಾಶ್ಮೀರವು ಗಾಝಾ ಅಲ್ಲ, ಕಾಶ್ಮೀರವು ಗಾಝಾ ಅಲ್ಲ ಎಂಬುದು ಸ್ಪಷ್ಟವಾಗಿದೆ, ಏಕೆಂದರೆ ಕಾಶ್ಮೀರದಲ್ಲಿ ಈಗ ಪ್ರತಿಭಟನೆಗಳು, ದಂಗೆಗಳು, ಒಳನುಸುಳುವಿಕೆ ವಿರಳವಾಗಿದೆ” ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಬದಲಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀತಿಗಳು ಕಾರಣವೆಂದು ಶೆಹ್ಲಾ ಹೇಳಿದ್ದಾರೆ.

"ಇವೆಲ್ಲದಕ್ಕಾಗಿ ನಾನು ಪ್ರಸ್ತುತ ಸರ್ಕಾರಕ್ಕೆ ಮನ್ನಣೆ ನೀಡಲು ಬಯಸುತ್ತೇನೆ. ವಿಶೇಷವಾಗಿ ಪ್ರಧಾನಿ ಮತ್ತು ಗೃಹ ಸಚಿವರಿಗೆ” ಎಂದು ಅವರು ಹೇಳಿದ್ದಾರೆ.

"ಅವರು (ಮೋದಿ & ಶಾ) ರಾಜಕೀಯ ಪರಿಹಾರವನ್ನು ಖಾತ್ರಿಪಡಿಸಿದ್ದಾರೆ, ಅದನ್ನು ನಾನು ರಕ್ತರಹಿತ ಎಂದು ಹೇಳುತ್ತೇನೆ" ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಶೆಹ್ಲಾ ಹೊಗಳಿದ್ದು ಇದೇ ಮೊದಲಲ್ಲ.

ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಟೀಕಾಕಾರರಾಗಿದ್ದ ಶೆಹ್ಲಾ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಇತ್ತೀಚೆಗೆ ಶ್ಲಾಘಿಸುತ್ತಾ ಬಂದಿದ್ದಾರೆ.

ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರದ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರ ಪ್ರಯತ್ನಗಳನ್ನು ಶೆಹ್ಲಾ ರಶೀದ್‌ ಅವರು ಅಭಿನಂದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News