ಪಹಲ್ಗಾಮ್ ದಾಳಿಯ ನಂತರ ಕುಸಿದ ಪ್ರವಾಸೋದ್ಯಮ ವಲಯ: ಶೇ. 50ರಷ್ಟು ರಿಯಾಯಿತಿ ಅಭಿಯಾನಕ್ಕೆ ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಿಂದ ಚಾಲನೆ
PC | PTI
ಶ್ರೀನಗರ: ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ತೀವ್ರ ತೊಂದರೆಗೀಡಾಗಿರುವ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು, ಕಾಶ್ಮೀರದ ಪ್ರವಾಸೋದ್ಯಮಿಗಳು, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದೊಂದಿಗೆ ಮೇ 27ರಿಂದ ನಾಲ್ಕು ದಿನಗಳ ಕಾಲ ‘ಫೇಮ್ ಟೂರ್’ ಎಂಬ ಬೃಹತ್ ಸ್ವರೂಪದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ.
ಈ ಅಭಿಯಾನಧಡಿ, ನಾಲ್ಕು ದಿನಗಳ ಅವಧಿಯಲ್ಲಿ ಕಣಿವೆ ರಾಜ್ಯವಾದ ಕಾಶ್ಮೀರಕ್ಕೆ ಪ್ರವಾಸಿಗಳನ್ನು ಮತ್ತೆ ಆಕರ್ಷಿಸಲು ಶೇ. 50ರವರೆಗಿನ ರಿಯಾಯಿತಿ ಹೊಂದಿರುವ ಪ್ರವಾಸದ ಪ್ಯಾಕೇಜ್ ಒದಗಿಸಲು ಕಾಶ್ಮೀರದ ಪ್ರವಾಸೋದ್ಯಮಿಗಳು ಹಾಗೂ ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಮುಂದಾಗಿವೆ.
ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗಳ ಮೇಲಿನ ಭೀಕರ ಭಯೋತ್ಪಾದಕ ದಾಳಿಯ ನಂತರ, ಇಲ್ಲಿಯವರೆಗೆ ಪ್ರವಾಸಿ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಶೇ. 90ರಷ್ಟು ತೀವ್ರ ಕುಸಿತವಾಗಿದೆ. ಹೀಗಾಗಿ, ಈ ಅಭಿಯಾನವು ಮೇ 27ರಿಂದ ಮೇ 30ರವರೆಗೆ ನಾಲ್ಕು ದಿನಗಳ ಕಾಲ ಮುಂದುವರಿಯಲಿದ್ದು, ಪಹಲ್ಗಾಮ್ ಸೇರಿದಂತೆ, ಶ್ರೀನಗರ, ಸೋನಾಮಾರ್ಗ್ ಹಾಗೂ ಗುಲ್ಮಾರ್ಗ್ ನಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಪ್ರವಾಸ ನಿರ್ವಾಹಕರು, ಪ್ರಖ್ಯಾತ ಹೋಟೆಲ್ ಉದ್ಯಮಿಗಳು ಹಾಗೂ ಪ್ರಮುಖ ಮಾಧ್ಯಮ ಪ್ರತಿನಿಧಿಗಳನ್ನು ಕರೆ ತರಲಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಪ್ರಯಾಣವು ಶ್ರೀನಗರ ವಿಮಾನ ನಿಲ್ದಾಣದಿಂದ ಪ್ರಾರಂಭಗೊಂಡು, ಪಹಲ್ಗಾಮ್ ಗೆ ತೆರಳಲಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವವರು ತಳ ಮಟ್ಟದ ಹೋಟೆಲ್ ಮಾಲಕರು, ಕುದುರೆ ಸವಾರರು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಹೋಟೆಲ್ ಉದ್ಯಮಿಗಳ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ತಾರಿಕ್ ಘನಿ ತಿಳಿಸಿದ್ದಾರೆ.
ಇದರ ಉದ್ದೇಶ ಕೇವಲ ಪ್ರವಾಸೋದ್ಯಮದ ಉತ್ತೇಜನ ಮಾತ್ರವಲ್ಲ; ಬದಲಿಗೆ ಜನರ ಜೀವನವನ್ನು ಸಂರಕ್ಷಿಸುವುದೂ ಕೂಡಾ ಆಗಿದೆ. ಇದು ಭಯದ ನಿರೂಪಣೆಯನ್ನು ಒಗ್ಗಟ್ಟಾಗಿ ಹಿಮ್ಮೆಟ್ಟಿಸುವ ಪ್ರಯತ್ನವಾಗಿದೆ. ನಾವು ನಮ್ಮ ಪ್ರವಾಸಿ ತಾಣಗಳನ್ನು ಮಾತ್ರ ಪ್ರದರ್ಶಿಸುತ್ತಿಲ್ಲ; ಬದಲಿಗೆ ಪ್ರವಾಸೋದ್ಯಮವನ್ನು ಅವಲಂಬಿಸಿರುವ ನಮ್ಮ ಮೂರು ಲಕ್ಷ ಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೀಡಾಗದಿರಲೆಂದು ಶೇ. 50ರಷ್ಟು ಭಾರಿ ಪ್ರಮಾಣದ ರಿಯಾಯಿತಿಯನ್ನು ಹೊಂದಿರುವ ಪ್ರವಾಸಿ ಪ್ಯಾಕೇಜ್ ಅನ್ನೂ ಘೋಷಿಸುತ್ತಿದ್ದೇವೆ” ಎಂದು ಘನಿ ಒತ್ತಿ ಹೇಳಿದ್ದಾರೆ.
ಮಹತ್ವದ ನಡೆಯೊಂದರಲ್ಲಿ, ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ನಿಯೋಗ, ಮಾಧ್ಯಮ ಹಾಗೂ ಪ್ರವಾಸೋದ್ಯಮಿಗಳೊಂದಿಗೆ ಸಂವಾದ ನಡೆಸಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರಿಗೂ ಆಹ್ವಾನ ನೀಡಲಾಗಿದೆ.